ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ವಿಧಾನಸೌಧದಲ್ಲಿ ನಾಳೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಸಕಲ ಸಿದ್ದತೆ ನಡೆದಿದೆ. ಅಡ್ಡ ಮತದಾನದ ಭೀತಿ ಮಧ್ಯೆ ಮೂರು ರಾಜಕೀಯ ಪಕ್ಷಗಳು ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸಿವೆ.
ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ನಂಬರ್ ಗೇಮ್ ಕಸರತ್ತು ಶುರುವಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದಿಂದ ಅಜಯ್ ಮಕೇನ್, ಸಯ್ಯದ್ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿ ನಾರಾಯಣ ಬಾಂಡಗೆಯನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಇದ್ದಾರೆ. ಐದನೇ ಅಭ್ಯರ್ಥಿಯನ್ನು ಅಖಾಡದಲ್ಲಿರುವುದರಿಂದ ರಾಜ್ಯಸಭೆ ಚುನಾವಣಾ ಕಳೆಗಟ್ಟಿದೆ.
ಪಕ್ಷಗಳ ಬಲಾಬಲ:ಅಭ್ಯರ್ಥಿಯ ಗೆಲುವಿಗೆ 45 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ. ಕಾಂಗ್ರೆಸ್ ಶಾಸಕರ ಬಲ ಸದ್ಯ 134 ಇದೆ (ಸುರಪುರ ಕಾಂಗ್ರೆಸ್ ಶಾಸಕ ನಿಧನ), ಬಿಜೆಪಿ 66 ಶಾಸಕರ ಬಲ ಹೊಂದಿದೆ. ಜೆಡಿಎಸ್ 19 ಶಾಸಕರ ಬಲ ಹೊಂದಿದೆ.
ಸರ್ವೋದಯ ಕರ್ನಾಟಕ ಪಕ್ಷದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾದ ಲತಾ ಮಲ್ಲಿಕಾರ್ಜುನ, ಗೌರಿಬಿದನೂರು ಶಾಸಕ ಪುಟ್ಟ ಸ್ವಾಮಿಗೌಡ ಅವರ ಮತಗಳು ಮತ ನಿರ್ಣಾಯಕವಾಗಿದೆ. ಈ ನಾಲ್ವರು ಯಾರಿಗೆ ಮತ ಚಲಾವಣೆ ಮಾಡಲಿದ್ದಾರೆ ಎಂಬುದು ಸದ್ಯದ ಕುತೂಹಲ.
ಸದ್ಯದ ಲೆಕ್ಕಾಚಾರದಂತೆ ಕಾಂಗ್ರೆಸ್ ಪಕ್ಷೇತರರ ಬೆಂಬಲದೊಂದಿಗೆ ತನ್ನ ಮೂರು ಅಭ್ಯರ್ಥಿಗಳನ್ನು ನಿರಾಯಾಸವಾಗಿ ಗೆಲ್ಲಿಸಲಿದೆ. ಬಿಜೆಪಿ ತನ್ನ ಓರ್ವ ಅಭ್ಯರ್ಥಿಯನ್ನು ನಿರಾಯಾಸವಾಗಿ ಗೆಲ್ಲಿಸಲಿದೆ. ಇತ್ತ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತ ಕೊರತೆ ಎದುರಾಗಿದೆ. ತನ್ನ ಅಭ್ಯರ್ಥಿಗೆ 45 ಮತ ಹಾಕಿದ ಬಳಿಕ ಬಿಜೆಪಿಯ 21 ಮತಗಳು ಉಳಿಯಲಿದೆ. ಜೊತೆಗೆ ಜೆಡಿಎಸ್ನ 19 ಸಂಖ್ಯಾಬಲದೊಂದಿಗೆ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 40 ಮತಗಳು ಬೀಳಲಿದ್ದು, ಮತ್ತೆ ಐದು ಮತಗಳ ಕೊರತೆಯಾಗಲಿವೆ. ಪಕ್ಷೇತರ ಅಭ್ಯರ್ಥಿಗಳ ಮತ ಇಲ್ಲಿ ನಿರ್ಣಾಯಕ. ಪ್ರಾಶಸ್ತ್ಯ ಮತಗಳ ಲೆಕ್ಕಾಚಾರ ಹಾಗೂ ಅಡ್ಡ ಮತದಾನದ ಸಾಧ್ಯತೆ ಮೇರೆಗೆ ಐದನೇ ಅಭ್ಯರ್ಥಿಯ ಗೆಲುವು ನಿಗದಿಯಾಗಲಿದೆ.
5 ಅಧಿಕೃತ ಏಜೆಂಟ್ಗಳ ನೇಮಕ:ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ ಮಾತನಾಡಿ, "ಬೆಳಗ್ಗೆ 9ರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಜೊತೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಸರ್ವೋದಯ ಕರ್ನಾಟಕ ಪಕ್ಷ ಸೇರಿದಂತೆ ಐದೂ ಪಕ್ಷಗಳ ಅಧಿಕೃತ ಏಜೆಂಟ್ ಇರಲಿದ್ದಾರೆ" ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ಸಲೀಂ ಅಹಮ್ಮದ್, ಬಿಜೆಪಿಯಿಂದ ಅರುಣ್ ಶಹಾಪುರ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಯೋಗೇಂದ್ರ ವಿಕ್ರಂರನ್ನು ಪಕ್ಷದ ಅಧಿಕೃತ ಏಜೆಂಟ್‌ರನ್ನಾಗಿ ನೇಮಿಸಲಾಗಿದೆ. ಜೆಡಿಎಸ್ ಹಾಗೂ ಸರ್ವೋದಯ ಕರ್ನಾಟಕ ಪಕ್ಷದಿಂದಲೂ ಏಜೆಂಟ್‌ಗಳನ್ನು ನೇಮಿಸಲಾಗಿದೆ.
ಸಂಜೆ 5ಕ್ಕೆ ಮತ ಎಣಿಕೆ: "ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಭದ್ರತೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂಜೆ ಐದು ಗಂಟೆಗೆ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಶಾಸಕರು ಬ್ಯಾಲೆಟ್ ಪತ್ರ ಪಡೆದು ಪ್ರಾಶಸ್ತ್ಯದ ಮತ ಹಾಕಬೇಕು. ಬಳಿಕ ಅದನ್ನು ತಮ್ಮ ಪಕ್ಷದ ಏಜೆಂಟ್ಗೆ ತೋರಿಸಬೇಕು. ಬೇರೆ ಏಜೆಂಟ್ಗೆ ಬ್ಯಾಲೆಟ್ ತೋರಿಸಿದರೆ ಅಸಿಂಧು ಆಗಲಿದೆ. ಪಕ್ಷೇತರ ಶಾಸಕರು ಏಜೆಂಟ್ಗಳಿಗೆ ತೋರಿಸುವ ಅಗತ್ಯ ಇಲ್ಲ" ಎಂದು ಚುನಾವಣಾಧಿಕಾರಿ ತಿಳಿಸಿದರು.
ಮತದಾನದ ವಿಧಾನ:
- ಮತ ನೀಡುವ ಉದ್ದೇಶಕ್ಕಾಗಿ, ಚುನಾವಣಾ ಅಧಿಕಾರಿ ಸರಬರಾಜು ಮಾಡಿರುವ ನೇರಳೆ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು. ಆ ಪೆನ್ನನ್ನು ಮತಪತ್ರದ ಜೊತೆಗೆ ನೀಡಲಾಗುತ್ತದೆ. ಇತರೆ ಯಾವುದೇ ಪೆನ್ನು, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ನು ಅಥವಾ ಇತರೆ ಯಾವುದೇ ಗುರುತು ಮಾಡುವ ಸಾಧನವನ್ನು ಬಳಸಬಾರದು.
- ಪ್ರಥಮ ಪ್ರಾಶಸ್ತ್ಯವಾಗಿ ಆಯ್ಕೆ ಮಾಡುವ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಿರುವ 'ಪ್ರಾಶಸ್ತ್ಯ ಕ್ರಮ'ದ ಕಾಲಂನಲ್ಲಿ '1' ಎಂಬ ಅಂಕಿಯನ್ನು ಬರೆಯುವ ಮೂಲಕ ಮತ ನೀಡಬೇಕು. ಈ '1' ಎಂಬ ಅಂಕಿಯನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಬರೆಯಬೇಕು.
- ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ, ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಷ್ಟು ಪ್ರಾಶಸ್ತ್ಯಗಳು ಇರುತ್ತದೆ. ಐದು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಆ ಪೈಕಿ ನಾಲ್ವರನ್ನು ಮಾತ್ರವೇ ಚುನಾಯಿಸಬೇಕಿದ್ದರೂ, ಶಾಸಕರು ಪ್ರಾಶಸ್ತ್ಯಕ್ಕನುಸಾರವಾಗಿ ತಮ್ಮ ಇಚ್ಛೆಯ ಅಭ್ಯರ್ಥಿಗಳ ಹೆಸರಿನ ಮುಂದೆ 1 ರಿಂದ 6 ರವರೆಗೆ ಪ್ರಾಶಸ್ತ್ಯಗಳನ್ನು ನಮೂದಿಸಬಹುದು.
- ಪ್ರಾಶಸ್ತ್ಯಗಳನ್ನು ಅಂಕಿಗಳಲ್ಲಿ ಎಂದರೆ 1.2.3 ಮುಂತಾಗಿ ಮಾತ್ರ ನಮೂದಿಸತಕ್ಕದ್ದು ಮತ್ತು ಒಂದು, ಎರಡು, ಮೂರು ಇತ್ಯಾದಿಯಾಗಿ ಪದಗಳಲ್ಲಿ ನಮೂದಿಸಬಾರದು.
- 1.2.3 ಮುಂತಾಗಿ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳನ್ನು ಅಥವಾ I,II,III ಮುಂತಾಗಿ ರೋಮನ್ ಅಂಕಿಗಳನ್ನು, 1.2.3 ಎಂದು ದೇವನಾಗರಿ ಅಂಕಿಗಳನ್ನು ಅಥವಾ ಸಂವಿಧಾನದ ಅನುಸೂಚಿ VIII ರಲ್ಲಿ ಮನ್ನಣೆ ಪಡೆದಿರುವ ಯಾವುದೇ ಭಾರತೀಯ ಭಾಷೆಯಲ್ಲಿ ಬಳಕೆಯಲ್ಲಿರುವ ಅಂಕಿಗಳನ್ನು ನಮೂದಿಸಬಹುದು.
- ಮತಪತ್ರದಲ್ಲಿ ಹೆಸರನ್ನು ಬರೆಯಬಾರದು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಅಥವಾ ಸಹಿ ಅಥವಾ ಕಿರು ಸಹಿಯನ್ನು ಹಾಕಬಾರದು, ಹಾಗೆಯೇ ಹೆಬ್ಬೆಟ್ಟಿನ ಗುರುತನ್ನು ಹಾಕಬಾರದು ಹಾಗೆ ಮಾಡಿದರೆ ಮತ ಪತ್ರ ಅಸಿಂಧುವಾಗುತ್ತದೆ.
- ಮತಪತ್ರವು ಕ್ರಮಬದ್ಧವಾದ ಮತಪತ್ರ ಎಂದಾಗಬೇಕಾದರೆ, ನೀವು ಅಭ್ಯರ್ಥಿಗಳಲ್ಲಿ ಒಬ್ಬರ ಹೆಸರಿನ ಮುಂದೆ '1' ಎಂಬ ಅಂಕಿಯನ್ನು ನಮೂದಿಸುವ ಮೂಲಕ ನಿಮ್ಮ ಪ್ರಥಮ ಪ್ರಾಶಸ್ತ್ಯವನ್ನು ಸೂಚಿಸುವುದು ಅಗತ್ಯ. ಉಳಿದ ಪ್ರಾಶಸ್ತ್ಯಗಳನ್ನು ನಮೂದಿಸುವುದು ನಿಮಗೆ ಬಿಟ್ಟದ್ದು ಎಂದರೆ ನೀವು ಎರಡನೇಯ ಮತ್ತು ಆನಂತರದ ಪ್ರಾಶಸ್ತ್ಯಗಳನ್ನು ನಮೂದಿಸಬಹುದು ಅಥವಾ ನಮೂದಿಸದಿರಬಹುದು.
- ರಾಜ್ಯಸಭಾ ಚುನಾವಣೆಯಲ್ಲಿ OPEN BALLOT SYSTEM ಅಳವಡಿಸಿರುವುದರಿಂದ ರಾಜಕೀಯ ಪಕ್ಷಗಳಿಗೆ ಸೇರಿದ ಮತದಾರರು ತಮ್ಮ ಪ್ರಾಶಸ್ತ್ಯ ಮತವನ್ನು ಚಲಾಯಿಸಿದ ನಂತರ ಅಂತಹ ಮತಪತ್ರವನ್ನು ಆಯಾ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟ್‌ರಿಗೆ ಮಾತ್ರ ತೋರಿಸತಕ್ಕದ್ದು, ನಂತರ ಮತಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕಬೇಕು.
- ಪಕ್ಷೇತರ ಮತದಾರರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದೇ ಇರುವುದರಿಂದ, ಅವರುಗಳು ತಮ್ಮ ಪ್ರಾಶಸ್ತ್ಯ ಮತವನ್ನು ಚಲಾಯಿಸಿದ ನಂತರ ತಮ್ಮ ಮತಪತ್ರವನ್ನು ಯಾರಿಗೂ ತೋರಿಸದೆ ನೇರವಾಗಿ ಮತಪೆಟ್ಟಿಗೆಯಲ್ಲಿ ಹಾಕಬೇಕು.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಹೈಡ್ರಾಮ ನಡೆದರೆ ಮಾತ್ರ ಅನಿರೀಕ್ಷಿತ ಅಭ್ಯರ್ಥಿ ಗೆಲ್ಲಲು ಸಾಧ್ಯ!