ಬೆಂಗಳೂರು: ರಾಜಧಾನಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭಿಸಲು ಬಿಬಿಎಂಪಿ ನಿರ್ಧರಿಸಿದೆ. ಸದ್ಯ ಒತ್ತುವರಿ ಕುರಿತು ಸರ್ವೆ ನಡೆಸಲಾಗುತ್ತಿದ್ದು, ಮಳೆಗಾಲದ ಬಳಿಕ ಮತ್ತಷ್ಟು ಒತ್ತುವರಿ ತೆರವು ಕಾರ್ಯ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸದ್ಯ ರಾಜಕಾಲುವೆಯ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಹರಿಯುವಿಕೆಗೆ ತಡೆಯುಂಟಾಗಿ ಭಾರೀ ಸಮಸ್ಯೆಯಾಗಿದೆ. ಈವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 3,182 ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿವೆ ದಾಖಲಾಗಿದ್ದು, ಇವುಗಳನ್ನು ಕೆಡವಲು ಗುರುತು ಮಾಡಿಕೊಳ್ಳಲಾಗಿದೆ.
ಸದ್ಯ ಪಾಲಿಕೆಯು ಒತ್ತುವರಿ ಕಟ್ಟಡಗಳನ್ನು ಕೆಡವಲು ಗುರುತಿಸಿರುವ ಪಟ್ಟಿಯಲ್ಲಿ ಪ್ರಭಾವಿಗಳ, ಶ್ರೀಮಂತರ ಮನೆಗಳು, ಅಪಾರ್ಟ್‌ಮೆಂಟ್‌ಗಳು ಸೇರಿದ್ದು ಆಗಸ್ಟ್ ನಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಮಳೆಗಾಲದ ಹಿನ್ನೆಲೆ ಪ್ರವಾಹ ಪ್ರದೇಶದಲ್ಲಿರುವ ಒತ್ತುವರಿ ಮೊದಲು ತೆರವು ಮಾಡಲು ಮುಂದಾಗಲಾಗುತ್ತಿದೆ. ನಗರದಲ್ಲಿ ರಾಜಕಾಲುವೆಗಳ ಒತ್ತುವರಿ ಅಥವಾ ಅತಿಕ್ರಮಣ ಗುರುತಿಸಲು ಸಹಾಯ ಮಾಡುವಂತೆ ಪಾಲಿಕೆಯು ಸಾರ್ವಜನಿಕರಲ್ಲಿ ಈ ಹಿಂದೆ ಮನವಿ ಮಾಡಿತ್ತು.
ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದು ಯಾರಿಗಾದರೂ ತಿಳಿದಿದ್ದರೆ ಅಥವಾ ಗಮನಕ್ಕೆ ಬಂದರೆ ವಲಯಗಳ ನಿರ್ದಿಷ್ಟ ಕಚೇರಿಗಳ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿತ್ತು. ಈ ಹಿಂದೆ ಹೈಕೋರ್ಟ್ ರಾಜಕಾಲುವೆಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಸಮೀಕ್ಷೆ ನಡೆಸಿ ಗುರುತಿಸಿ 10 ದಿನಗಳ ಒಳಗೆ ವರದಿ ನೀಡುವಂತೆ ಬಿಬಿಎಂಪಿಗೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾರ್ವಜನಿಕರ ಸಹಕಾರ ಕೋರಿತ್ತು. ಸಾರ್ವಜನಿಕರು ಅತಿಕ್ರಮಣವಾದ ರಾಜಕಾಲುವೆ ಪ್ರದೇಶವನ್ನು ಸ್ಪಷ್ಟವಾಗಿ ಫೋಟೋ ಸಹಿತ ನಿರ್ದಿಷ್ಟ ಅಧಿಕಾರಿಗಳಿಗೆ ಕಳುಹಿಸುವಂತೆ ತಿಳಿಸಿತ್ತು. ಆಗ ನೂರಾರು ಫೋಟೋಗಳು ಬಿಬಿಎಂಪಿ ಕೈಸೇರಿದ್ದವು.