ಬೆಂಗಳೂರು:ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಹವಾಮಾನ ಇಲಾಖೆಯು ಮುಖ್ಯವಾಗಿ ಇಂದೂ ಸೇರಿದಂತೆ 5 ದಿನಗಳವರೆಗೆ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದು ಸಂಜೆಯಿಂದ ಆಗಸ್ಟ್ 30ರವರೆಗೆ ಆರೆಂಜ್ ಅಲರ್ಟ್, ಅಗಸ್ಟ್ 31 ಮತ್ತು ಯೆಲ್ಲೋ ಅಲರ್ಟ್ ಕೊಡಲಾಗಿದೆ. ದಕ್ಷಿಣ ಒಳನಾಡಿನ ಬೆಳಗಾವಿ ಜಿಲ್ಲೆಗೆ ಇಂದಿನಿಂದ ಆಗಸ್ಟ್ 28ರವರೆಗೆ ಮತ್ತು ಬಳಿಕ ಆಗಸ್ಟ್ 30ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಆಗಸ್ಟ್ 29 ಮತ್ತು 30ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಮತ್ತು ಆಗಸ್ಟ್ 29ಕ್ಕೆ ಆರೆಂಜ್ ಅಲರ್ಟ್ ಮತ್ತು ಆಗಸ್ಟ್ 27, 28 ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕೊಡಗು ಜಿಲ್ಲೆಗೆ ಆಗಸ್ಟ್ 29ರಂದು ಆರೆಂಜ್ ಅಲರ್ಟ್, ನಂತರದ ಮೂರು ದಿನ ಯೆಲ್ಲೋ ಅಲರ್ಟ್, ಹಾಸನ ಜಿಲ್ಲೆಗೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಒರೊಗ್ರಾಫಿಕ್ ಲಿಫ್ಟಿಂಗ್‌ನಿಂದಾಗಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದೆ. ಗಾಳಿಯ ವೇಗವು ನಿರಂತರವಾಗಿ ಗಂಟೆಗೆ 30ರಿಂದ 40 ಕಿಲೋಮೀಟರ್ ಇರಲಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೂಡ ಹೆಚ್ಚು ಮಳೆ ಸುರಿಯಲಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ನಿರಂತರ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.