ಬೆಂಗಳೂರು:ರಾಜ್ಯಾದ್ಯಂತ ಜೂನ್ ತಿಂಗಳಿನಲ್ಲಿ ಕೆಲವೆಡೆ ಮಾತ್ರ ವಾಡಿಕೆಯಷ್ಟು ಮಳೆಯಾಗಿದೆ. ಇನ್ನು ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಮಲೆನಾಡು, ಕರಾವಳಿಯಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆಯಾದರೂ ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಜೂನ್ನಲ್ಲಿ ರಾಜ್ಯಾದ್ಯಂತ 208 ಮಿ.ಮೀ. ಮಳೆ ಬೀಳಬೇಕಿತ್ತು. 205 ಮಿ.ಮೀ. ಬಿದ್ದಿದ್ದು, ವಾಡಿಕೆಗಿಂತ ಶೇ.2 ಕಡಿಮೆ ಪ್ರಮಾಣದಲ್ಲಿ ಸುರಿದಿದೆ. ಆದರೆ, ರಾಜ್ಯಾದ್ಯಂತ ಒಟ್ಟಾರೆ ವಾಡಿಕೆಯಷ್ಟೇ ಮಳೆಯಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.
ಜೀವ ನದಿ ಕಾವೇರಿ ಉಗಮಸ್ಥಾನ ತಲಕಾವೇರಿ, ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ, ನಾಪೋಕ್ಲು ಮತ್ತಿತರ ಭಾಗಗಳಲ್ಲಿ ಜೋರು ಮಳೆಯಾಗಿದೆ. ತ್ರಿವೇಣಿ ಸಂಗಮಕ್ಕೆ ಮತ್ತೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ ಮೂರು ದಿನ ಯೆಲ್ಲೋ ಅಲರ್ಟ್ ಇದ್ದರೆ, ಜುಲೈ 6 ಹಾಗೂ ಜುಲೈ 7ರಂದು ಆರೆಂಜ್ ಅಲರ್ಟ್ ಇರಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಜುಲೈ 3 ರಿಂದ ಜುಲೈ 6ರ ವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ಕಳೆದ ಎರಡ್ಮೂರು ದಿನದಿಂದಲೂ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಭಾರೀ ಗಾಳಿ ಇದೆ. ಬೆಂಗಳೂರಿನ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ. ಇಂದಿನಿಂದ ಜುಲೈ 5ರ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ವಾತಾವರಣವಿದ್ದು, ಡಿಸೆಂಬರ್/ ಜನವರಿ ತಿಂಗಳ ಅನುಭವ ನೀಡುತ್ತಿದೆ.
ಇದನ್ನೂ ಓದಿ:ಜುಲೈನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆ ಸಾಧ್ಯತೆ: ಐಎಂಡಿ ಮುನ್ಸೂಚನೆ - Rainfall in July