ಜಮೀನಿಗೆ ನುಗ್ಗಿದ ಮಳೆ ನೀರು; ತರಕಾರಿ ಬೆಳೆ ನಾಶದಿಂದ ಹಾವೇರಿ ರೈತರು ಕಂಗಾಲು (ETV Bharat) ಹಾವೇರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಜಿಲ್ಲೆಯಲ್ಲಿ ನಿರಂತರ ಮಳೆಯ ಬದಲು ಆಗಾಗ್ಗೆ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಧಾರಾಕಾರ ಸುರಿದರೆ ಕೆಲವೊಮ್ಮೆ ಜಿಟಿ ಜಿಟಿ ಮಳೆಯಾಗುತ್ತಿದೆ.
ಈ ಮಧ್ಯೆ ಮಲೆನಾಡು ಮತ್ತು ಪಶ್ಚಿಮಘಟ್ಟಗಳಲ್ಲಿ ವ್ಯಾಪಕ ಮಳೆಯಾಗಿರುವುದು ಹಾವೇರಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುವಂತೆ ಮಾಡಿದೆ. ಎರಡು ದಿನಗಳಿಂದ ಏರಿಕೆಯಾಗಿದ್ದ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವು ಸ್ವಲ್ಪ ಕಡಿಮೆಯಾಗುತ್ತಿದೆ. ಸಂಪರ್ಕ ಕಳೆದುಕೊಂಡ ರಸ್ತೆಗಳು ಸೇತುವೆಗಳ ಮೇಲೆ ಸ್ವಲ್ಪ ಪ್ರಮಾಣದ ನೀರು ಕೆಳಗೆ ಬರಲಾರಂಭಿಸಿದೆ. ಆದ್ರೆ ನದಿ ತಟದಲ್ಲಿರುವ ರೈತರ ಬೆಳೆಗಳಿಗೆ ನೀರು ಹೊಕ್ಕಿದ್ದು ಬೆಳೆಗಳೆಲ್ಲಾ ಹಾಳಾಗಲಾರಂಭಿಸಿವೆ.
ಹಾವೇರಿ ತಾಲೂಕಿನ ಕೊರಡೂರು ಗ್ರಾಮದಲ್ಲಿ ತರಕಾರಿ ಬೆಳೆದಿದ್ದ ಫಕ್ಕಿರೇಶ ಕೊಡಬಾಳ ಎಂಬ ರೈತನ ತರಕಾರಿ ಬೆಳೆಗಳು ನೀರು ಪಾಲಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಫಕ್ಕಿರೇಶ್ ಎರಡು ಎಕರೆ ಜಮೀನಿನಲ್ಲಿ ವಿವಿಧ ತರಕಾರಿ ಬೆಳೆ ಬೆಳೆದಿದ್ದರು. ಟೊಮೆಟೋ ಮೆಣಸಿನಕಾಯಿ, ಬೆಂಡೆ ಮತ್ತು ಚವಳಿಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆದಿದ್ದರು. ಮೆಣಸಿನಕಾಯಿ ಮತ್ತು ಮತ್ತು ಟೊಮೆಟೋ ಫಸಲು ಬಿಟ್ಟಿದ್ದು ಉತ್ತಮ ದರ ಸಹ ಇದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಉತ್ತಮ ಬೆಳೆ ಮತ್ತು ಉತ್ತಮ ಬೆಲೆ ಇದ್ದರೂ ಸಹ ನದಿಯ ನೀರು ಜಮೀನಿಗೆ ನುಗ್ಗಿದ್ದಕ್ಕೆ ಟೊಮೆಟೋ, ಚವಳಿಕಾಯಿ, ಮೆಣಸಿನಕಾಯಿ ಸೇರಿದಂತೆ ತರಕಾರಿ ಬೆಳೆಗಳು ಕೊಳೆಯಲಾರಂಭಿಸಿವೆ.
ಕಳೆದ ವರ್ಷ ಮಳೆ ಕೈಕೊಟ್ಟು ನಷ್ಟ ಅನುಭವಿಸಿದ್ದೇವೆ. ಈ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಉತ್ತಮ ಫಸಲು ಇದೆ ಉತ್ತಮ ಬೆಲೆ ಇರುವ ಕಾರಣ ಬೆಳೆಗೆ ಮಾಡಿದ ಖರ್ಚು ತೆಗೆದು ಲಕ್ಷಾಂತರ ರೂಪಾಯಿ ಆದಾಯದ ಕನಸು ಕಂಡಿದ್ದ ಫಕ್ಕಿರೇಶ್ ಇದೀಗ ನಷ್ಟ ಅನುಭವಿಸುತ್ತಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚವಳಿಕಾಯಿ, ಟೊಮೆಟೊ ಮೆಣಸಿನಕಾಯಿ ಬೆಳೆದಿದ್ದೇವೆ. ಪ್ರಸ್ತುತ ವರ್ಷ ಕೂಲಿಕಾರ್ಮಿಕರ ಸಮಸ್ಯೆ ಇರುವ ಕಾರಣ ಮನೆಯವರೆಲ್ಲಾ ದುಡಿದು ಉತ್ತಮ ಬೆಳೆ ಬೆಳೆದಿದ್ದು, ಫಸಲು ಕೂಡ ಚೆನ್ನಾಗಿದೆ. ಆದರೆ ಮಳೆರಾಯನ
ಆರ್ಭಟದಿಂದ ನದಿಯ ನೀರು ಜಮೀನಿಗೆ ಹೊಕ್ಕು ಎಲ್ಲಾ ಹಾಳಾಗಿದೆ ಎನ್ನುತ್ತಾರೆ ಫಕ್ಕಿರೇಶ.
ಹೀಗೆ ನದಿ ತಟದಲ್ಲಿರುವ ಬಹುತೇಕ ರೈತರದ್ದು ಇದೇ ಪರಿಸ್ಥಿತಿಯಾಗಿದ್ದರೆ, ನದಿ ದಂಡೆಯ ಮೇಲೆ ಬೆಳೆದ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಹತ್ತಿ ಸೇರಿದಂತೆ ತೋಟಗಾರಿಕಾ ಬೆಳೆಗಳು ಸಹ ಹಾಳಾಗಿವೆ. ಮೊದಲೇ ಬರ ಅನುಭವಿಸಿ ಸಾಲ ಮಾಡಿದ್ದೇವೆ. ಈ ವರ್ಷ ಸಾಲಸೋಲ ಮಾಡಿ ಬಿತ್ತನೆ ಬೀಜ ಗೊಬ್ಬರ ತಂದು ಬಿತ್ತನೆ ಮಾಡಿದ್ದೆವು. ಫಸಲು ಸಹ ಚೆನ್ನಾಗಿ ಬಂದಿತ್ತು ಅಷ್ಟರಲ್ಲಿ ಮಳೆರಾಯನ ಅಬ್ಬರದಿಂದ ಈ ರೀತಿ ಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಯಾವ ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ಗೋಳು ಕೇಳಿಲ್ಲಾ. ಈ ಹಿಂದೆ ಮಾಡಿದ ಬೆಳೆವಿಮೆ ಇನ್ನೂ ಸಿಕ್ಕಿಲ್ಲಾ ಈ ರೀತಿಯಾದರೆ ರೈತರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಅನ್ನದಾತರು.
ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಆರ್ಭಟ: ಮತ್ತೆ 5 ದಿನ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಹೈ ಅಲರ್ಟ್ - Rain High Alert in Karnataka