ಬೆಂಗಳೂರು:ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ತೀವ್ರತೆ ಮುಂದುವರೆದಿದೆ. ವರ್ಷಧಾರೆ ಹಿನ್ನೆಲೆಯಲ್ಲಿ ಆ ಭಾಗದ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದರೆ, ನಂತರದ ಎರಡು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗಕ್ಕೆ ಇಂದು ಆರೆಂಜ್, ನಾಳೆ ಯೆಲ್ಲೋ, ಚಿಕ್ಕಮಗಳೂರು ಜಿಲ್ಲೆಗೆ ಮುಂದಿನ 48 ಗಂಟೆಗಳ ಕಾಲ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ, ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಇದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗ ಗಂಟೆಗೆ 30ರಿಂದ 40 ಕಿ.ಮೀ.ಗೆ ತಲುಪಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲೂ ಹೆಚ್ಚು ಮಳೆ ಸುರಿಯಲಿದೆ. ಒಳನಾಡಿನ ಉಳಿದ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ:ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿಗ್ರಿ ಮತ್ತು 20 ಡಿಗ್ರಿ ದಾಖಲಾಗಲಿದೆ.
''ಸರಾಸರಿ ಸಮುದ್ರ ಮಟ್ಟದಲ್ಲಿ ಆಫ್ ಶೋರ್ ಟ್ರಫ್ ಈಗ ದಕ್ಷಿಣ ಗುಜರಾತ್‌ನ ಮೂಲಕ ಮಧ್ಯ ಕೇರಳದ ಕರಾವಳಿಯವರೆಗೆ ಹಾದು ಹೋಗುತ್ತಿದೆ. ಅದರಿಂದ ಕರಾವಳಿ ಕರ್ನಾಟಕ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಬಲವಾದ ಗಾಳಿ ಒಮ್ಮುಖವಾಗಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ಮಾನ್ಸೂನ್ ಕರಾವಳಿಯ ಸಕ್ರಿಯವಾಗಿದೆ. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿದ್ದು ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ'' ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ತಿಳಿಸಿದ್ದಾರೆ.
''ಇಂದು ಕರಾವಳಿಯ ಬಹುತೇಕ ಸ್ಥಳಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ. ನಿನ್ನೆಯಿಂದ ಅತಿ ಹೆಚ್ಚು ಮಳೆ 18 ಸೆಂ.ಮೀ. ಮಳೆಯು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ನಲ್ಲಿ 12 ಸೆಂ.ಮೀ. ಮಳೆ ಸುರಿದಿದೆ'' ಎಂದು ಡಾ.ಎನ್.ಪುವಿಯರಸನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗೇರುಸೊಪ್ಪದಿಂದ 51 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಹೊನ್ನಾವರದಲ್ಲಿ ಶರಾವತಿ ಪಾತ್ರದ ಜನರಿಗೆ ಸಂಕಷ್ಟ - Water Released From Gerusoppa