ಹಾಸನ: ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಪುನರ್ವಸು ಮತ್ತು ಪುಷ್ಯ ಮಳೆಗೆ ನಲುಗಿದ್ದ ಹಾಸನದಲ್ಲೀಗ, ಆಶ್ಲೇಷ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಮೂರನೇ ಬಾರಿಗೆ ಗುಡ್ಡ ಕುಸಿತಗೊಂಡು ಬೆಂಗಳೂರು - ಮಂಗಳೂರು ನಡುವಿನ ರೈಲ್ವೆ ಸಂಚಾರ ಕಡಿತಗೊಂಡಿದೆ. ಹೀಗಾಗಿ, ಪ್ರಯಾಣಿಕರು ಅಹೋರಾತ್ರಿ ರೈಲಿನಲ್ಲಿಯೇ ಕಾಲ ಕಳೆಯುವಂತಾಯಿತು.
ಹಾಸನ - ಮಂಗಳೂರು ಮಾರ್ಗದಲ್ಲಿನ ಆಲೂರು ಮತ್ತು ಸಕಲೇಶಪುರ ನಡುವಿನ ಬಾಳ್ಳುಪೇಟೆ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತಗೊಂಡಿದೆ. ಮರಗಳ ಸಮೇತವಾಗಿ ಹಳಿಯ ಮೇಲೆ ಮಣ್ಣು ಕುಸಿದು ಬಿದ್ದಿದೆ. ಘಟನೆಯಿಂದ ಬೆಂಗಳೂರು - ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಬೆಂಗಳೂರು - ಕಣ್ಣೂರು, ಬೆಂಗಳೂರು - ಮುರುಡೇಶ್ವರ ಮತ್ತು ಹಾಸನ - ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವನ್ನೂ ಬಂದ್ ಮಾಡಲಾಗಿದೆ. ಆಲೂರು - ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ.
ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ 6 ಕಡೆ ರೈಲುಗಳನ್ನು ನಿಲ್ಲಿಸಲಾಗಿದೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಇಡೀ ರಾತ್ರಿ ಪರದಾಡುವಂತಾಗಿದೆ. ರಾತ್ರಿ ವೇಳೆ ಸಂಚಾರ ನಡೆಸುವ ರೈಲುಗಳನ್ನು ಸಕಲೇಶಪುರ, ಯಡಕುಮಾರಿ, ಶಿರವಾಗಲು, ಆಲೂರು ಸೇರಿ 6 ರೈಲ್ವೆ ನಿಲ್ದಾಣಗಳಲ್ಲಿಯೇ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.