ಬೆಂಗಳೂರು : ಆನೆ ಮತ್ತು ಮಾನವ ಸಂಘರ್ಷದಿಂದ ರಾಜ್ಯದಲ್ಲಿ ಪ್ರತಿವರ್ಷ 50 ಸಾವು ಸಂಭವಿಸುತ್ತಿದ್ದು, ಅಮೂಲ್ಯ ಜೀವ, ಬೆಳೆ ಉಳಿಸಲು ರೈಲ್ವೆ ಬ್ಯಾರಿಕೇಡ್ ಪರಿಹಾರವಾಗಿದೆ. 324 ಕಿ. ಮೀ ತಡೆಗೋಡೆ ನಿರ್ಮಾಣಕ್ಕೆ 2 ವರ್ಷದಲ್ಲಿ 500 ಕೋಟಿ ಹೆಚ್ಚಿನ ಅನುದಾನ ನೀಡುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಹಾಗೂ 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಸುಮಾರು 333 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 101 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಒತ್ತುವರಿ ತೆರವಿನ ಬಗ್ಗೆ ಸ್ಪಷ್ಟನೆ ನೀಡಿದ ಈಶ್ವರ್ ಖಂಡ್ರೆ, 2015ರ ನಂತರದ ಒತ್ತುವರಿ ತೆರವು ಮಾಡಲಾಗುತ್ತಿದೆ. ಜೊತೆಗೆ 2015ರ ಸರ್ಕಾರದ ಆದೇಶ ಮತ್ತು ನಡವಳಿಯಂತೆ 3 ಎಕರೆಗಿಂತ ಮೇಲ್ಪಟ್ಟ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಕಳೆದ ವರ್ಷದಿಂದ ಸುಮಾರು 2500 ಎಕರೆ ಒತ್ತುವರಿ ತೆರವು ಮಾಡಿಸಲಾಗಿದೆ ಎಂದು ತಿಳಿಸಿದರು.
ಬಡ ರೈತರ ಒತ್ತುವರಿಯನ್ನು (ಪಟ್ಟಾಭೂಮಿ ಮತ್ತು ಒತ್ತುವರಿ ಸೇರಿ 3 ಎಕರೆ) ತೆರವು ಮಾಡಿಸುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ತಾವು ಸಚಿವರಾದ ತರುವಾಯ ಹೊಸದಾಗಿ 11559 ಎಕರೆ ಭೂಮಿಯನ್ನು ಅಧಿಸೂಚಿತ ಅರಣ್ಯ ಅಥವಾ ಮೀಸಲು ಅರಣ್ಯ ಎಂದು ಘೋಷಿಸಿರುವುದಾಗಿ ತಿಳಿಸಿದರು.
5 ಕೋಟಿ 48 ಲಕ್ಷ ಗಿಡ ನೆಡಲಾಗಿದೆ :ಅರಣ್ಯ ಇಲಾಖೆಯ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲಾಗಿದ್ದು, ಡಿ.ಆರ್.ಎಫ್.ಓ ವರೆಗಿನ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಬಹು ದಿನಗಳಿಂದ ಬಡ್ತಿ ಸಿಗದೆ ಇದ್ದ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ. ಅರಣ್ಯ ಇಲಾಖೆಗೆ ಹೊಸ ಲಾಂಛನ ರೂಪಿಸಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು 5 ಕೋಟಿ ಗಿಡ ನೆಡುವ ಸಂಕಲ್ಪ ಮಾಡಿ, ಗುರಿ ಮೀರಿದ ಸಾಧನೆಯೊಂದಿಗೆ 5 ಕೋಟಿ 48 ಲಕ್ಷ ಗಿಡ ನೆಟ್ಟು ಜಿಯೋ ಟ್ಯಾಗ್ ಮಾಡಲಾಗಿದೆ. ಅದರ ವಿವರವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ವಿವರ ನೀಡಿದರು.
ಬೆಟ್ಟಗುಡ್ಡವನ್ನು ಅರಣ್ಯ ಎಂದು ಪರಿಗಣಿಸಲಾಗುತ್ತದೆ:ಅರಣ್ಯದ ಒತ್ತುವರಿಯೂ ಅವ್ಯಾಹತವಾಗಿದೆ. ಚಿರತೆಗಳು, ನವಿಲುಗಳು ಮತ್ತು ಸರೀಸೃಪಗಳ ಆವಾಸಸ್ಥಾನವಾದ ಬೆಟ್ಟಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹಲವು ಬೆಟ್ಟ ಗುಡ್ಡಗಳು ನಾಮಾವಶೇಷವಾಗಿವೆ. ಚಿರತೆಗಳು ನಾಡಿಗೆ ಬರುತ್ತವೆ ಎಂದು ಜನ ದೂರುತ್ತಾರೆ. ನವಿಲುಗಳು ತಮ್ಮ ಬೆಳೆ ನಾಶ ಮಾಡುತ್ತವೆ ಎನ್ನುತ್ತಾರೆ. ಬೆಟ್ಟಗುಡ್ಡಗಳಿದ್ದರೆ ಅಲ್ಲಿ ಅವು ಹಾವು ಇತ್ಯಾದಿ ತಿಂದು ಬದುಕುತ್ತವೆ. ಚಿರತೆಗಳು ಬೆಟ್ಟದ ಗುಹೆಗಳಲ್ಲಿ ವಾಸಿಸುತ್ತವೆ. ಹೀಗಾಗಿಯೇ ಮರ, ಗಿಡ ಇಲ್ಲದಿದ್ದರೂ ಬೆಟ್ಟಗುಡ್ಡವನ್ನು ಅರಣ್ಯ ಎಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.
ಅಕ್ರಮ ಒತ್ತುವರಿ ನಿಗ್ರಹ, ಕಳ್ಳಬೇಟೆ ತಡೆ, ಕಾಡ್ಗಿಚ್ಚು ನಿಯಂತ್ರಣವೇ ಮುಂತಾದ ಹಲವು ಕ್ಲಿಷ್ಟಕರ ಕಾರ್ಯಾಚರಣೆ ಮೂಲಕ ಅರಣ್ಯವನ್ನು ಕಾಪಾಡುತ್ತಿದ್ದಾರೆ. ಇದರ ಜೊತೆಗೆ, ಅರಣ್ಯ ಅಭಿವೃದ್ಧಿ, ಅರಣ್ಯ ಸಂರಕ್ಷಣೆ, ಸಂಶೋಧನೆ, ಕಾರ್ಯಯೋಜನೆ, ತರಬೇತಿ ಮುಂತಾದ ಕ್ಷೇತ್ರಗಳಲ್ಲಿಯೂ ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾವೀನ್ಯಪೂರ್ಣ ಪರಿಹಾರವನ್ನೂ ಒದಗಿಸುತ್ತಿರುವ ಅರಣ್ಯ ಸಿಬ್ಬಂದಿಯನ್ನು ಶ್ಲಾಘಿಸಿದ ಅವರು, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮೃತ ಅರಣ್ಯ ಸಿಬ್ಬಂದಿಗೆ ಪರಿಹಾರ ಮೊತ್ತ 50 ಲಕ್ಷಕ್ಕೆ ಏರಿಕೆ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಣ್ಯದಲ್ಲಿ ಕರ್ತವ್ಯದಲ್ಲಿ ಮೃತ ಪಡುವ ಸಿಬ್ಬಂದಿಗೆ ಪರಿಹಾರ ನೀಡುವ ನಿರ್ಧಾರವನ್ನು 2017ರಲ್ಲಿ ಕೈಗೊಂಡರು. ಹಿಂದೆ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ನಂತರ 30 ಲಕ್ಷಕ್ಕೆ ಹೆಚ್ಚಿಸಲಾಯಿತು. ಈಗ ಮುಖ್ಯಮಂತ್ರಿಯವರು ಆ ಮೊತ್ತವನ್ನು 50 ಲಕ್ಷಕ್ಕೆ ಹೆಚ್ಚಳ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರತಿಜ್ಞಾವಿಧಿ ಬೋಧನೆ :ಇಂದು ಅರಣ್ಯ ಪಡೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ 267 ಅರಣ್ಯ ವೀಕ್ಷಕರಿಗೆ ಸ್ವತಃ ಮುಖ್ಯಮಂತ್ರಿಯವರೇ ನೇಮಕಾತಿ ಪತ್ರ ನೀಡುತ್ತಿರುವುದು ವಿಶೇಷವಾಗಿದೆ. ಈ ವೇಳೆ ಈಶ್ವರ್ ಖಂಡ್ರೆ ಅವರು, 'ಶ್ರದ್ಧೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತೇನೆ, ಅಕ್ರಮ ಮರ ಕಡಿತಲೆ, ಅರಣ್ಯ ಒತ್ತುವರಿ ಆಗದಂತೆ ಕಣ್ಗಾವಲು ಇಡುತ್ತೇನೆ' ಎಂದು ನೂತನ ಅರಣ್ಯ ವೀಕ್ಷಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2023-24ನೇ ಸಾಲಿನಲ್ಲಿ 310 ಅರಣ್ಯ ವೀಕ್ಷಕರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು. ಒಟ್ಟು 1,94,007 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಸ್ಎಸ್ಎಲ್ಸಿ ಮತ್ತು ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅತಿ ಹೆಚ್ಚು ಅಂಕ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಪಾರದರ್ಶಕವಾಗಿ 267 ಅರ್ಹ ಅಭ್ಯರ್ಥಿಗಳು ಎಲ್ಲಾ ವೃತ್ತದಿಂದ ಆಯ್ಕೆಯಾಗಿದ್ದಾರೆ.