ಬೆಳಗಾವಿ:ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ನಕಲಿ ವೈದ್ಯರು ಮತ್ತು ನಕಲಿ ಕ್ಲಿನಿಕ್ಗಳ ವಿರುದ್ಧ ಕಾರ್ಯಚರಣೆ ಕೈಗೊಂಡಿದೆ. ಡಿಎಚ್ಓ ಡಾ.ಮಹೇಶ್ ಕೋಣಿ ನೇತೃತ್ವದಲ್ಲಿ ನಕಲಿ ವೈದ್ಯನ ಕ್ಲಿನಿಕ್ಗೆ ಬೀಗ ಜಡಿಯಲಾಗಿದೆ.
ನಗರದ ಬಡಕಲ್ ಗಲ್ಲಿಯಲ್ಲಿರುವ ನಕಲಿ ವೈದ್ಯನ ಶಿವಾ ಹೆಸರಿನ ಕ್ಲಿನಿಕ್ಗೆ ಬೀಗ ಹಾಕಲಾಗಿದೆ. ಕ್ಲಿನಿಕ್ ಒಳಗಡೆ ಇಸಿಜಿ ಸೇರಿದಂತೆ ಆಯುರ್ವೇದ ಮೆಡಿಸಿನ್ ಪೂರೈಸಲಾಗುತ್ತಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಕ್ಲಿನಿಕ್ನ್ನು ಜಾಲಾಡಿ ಮಾತ್ರೆ, ಔಷಧ, ಯಂತ್ರೋಪಕರಣಗಳ ಪಟ್ಟಿ ಮಾಡಿಕೊಂಡು ನಕಲಿ ವೈದ್ಯನಿಗೆ ನೋಟಿಸ್ ನೀಡಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಮಾತನಾಡಿ, 'ದಶಕಗಳಿಂದಲೂ ಇದೇ ಕಟ್ಟಡದಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಇದೇ ವ್ಯಕ್ತಿಗೆ ಸೇರಿದ ಇನ್ನೊಂದು ದೊಡ್ಡ ಆಸ್ಪತ್ರೆ ಕೂಡ ಇದೆ. ಅದೂ ಅನಧಿಕೃತ ಆಗಿರುವ ಸಂಶಯವಿದ್ದು, ನೋಟಿಸ್ ನೀಡಿ ಪರಿಶೀಲಿಸಲಾಗುವುದು. ಈಗ ಸೀಜ್ ಮಾಡಿರುವ ಕ್ಲಿನಿಕ್ ತೆರೆಯಲು ನಿಯಮಾನುಸಾರ ಅನುಮತಿ ಪಡೆದಿಲ್ಲ. ರೋಗಿಗಳ ಚಿಕಿತ್ಸೆಗೆ ಸೂಕ್ತ ಸೌಕರ್ಯಗಳಿಲ್ಲ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳೂ ಇಲ್ಲ. ಪ್ರಮುಖವಾಗಿ ಕ್ಲಿನಿಕ್‌ನಲ್ಲಿ ನೇಮಕಗೊಂಡ ಸಿಬ್ಬಂದಿ ಕೂಡ ವೈದ್ಯಕೀಯಕ್ಕೆ ಸಂಬಂಧಿಸಿದ ಯಾವುದೇ ಶಿಕ್ಷಣ ಪಡೆದಿಲ್ಲ' ಎಂದು ತಿಳಿಸಿದರು.
ಅಲ್ಲದೇ, ದಾಳಿ ವೇಳೆ ಕ್ಲಿನಿಕ್‌ನಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಕೂದಲು ಉದುರುವುದು, ನರ ದೌರ್ಬಲ್ಯ, ಸೌಂದರ್ಯ ವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಉಪಚಾರ ಮಾಡಿದ ದಾಖಲೆಗಳು ಸಿಕ್ಕಿವೆ. ವಿವಿಧ ರೀತಿಯ ಔಷಧಿ, ಮಾತ್ರೆ, ಪೌಡರ್‌ಗಳನ್ನೂ ಇವರು ರೋಗಿಗಳಿಗೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ಇಡೀ ಜಿಲ್ಲೆಯಾದ್ಯಂತ ನಕಲಿ ಕ್ಲಿನಿಕ್ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ಮಹೇಶ ಕೋಣಿ ಮಾಹಿತಿ ನೀಡಿದ್ದಾರೆ.