ರಾಯಚೂರು: 2024ರ ಲೋಕಸಭಾ ಅಖಾಡದ ಒಟ್ಟು ಆರು ಹಂತದ ಚುನಾವಣೆ ಮುಕ್ತಾಯವಾಗಿದ್ದು, ಇಂದು 7ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಜೂನ್ 4ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡರು. ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆಯು ಜಿಲ್ಲೆಯಲ್ಲಿ ಮೇ 7 ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದರ ಮತ ಎಣಿಕೆ ಪ್ರಕ್ರಿಯೆಯು ನಗರದ ಎಸ್.ಆರ್.ಪಿ.ಎಸ್ ಹಾಗೂ ಎಲ್.ವಿ.ಡಿ ಕಾಲೇಜಿನಲ್ಲಿ ಜೂ. 4ರಂದು ಜರುಗಲಿದೆ. ಮತ ಎಣಿಕೆ ಕಾರ್ಯಕ್ಕೆ 159 ಮೇಲ್ವಿಚಾರಕರು, 168 ಮೈಕ್ರೋ ಅಬ್ಸರ್ವರ್ ಹಾಗೂ 159 ಮತ ಎಣಿಕೆ ಸಹಾಕಯರನ್ನು ನೇಮಕ ಮಾಡಲಾಗಿದೆ. ಜೂನ್ 4ರ ಬೆಳಗ್ಗೆ 7 ಗಂಟೆಗೆ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಬೆಳಗ್ಗೆ 8ರಿಂದ ಅಂಚೆ ಮತ ಹಾಗೂ ಇವಿಎಂ ಮತಗಳ ಎಣಿಕೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಶೋರಾಪೂರ (ಸುರಪುರ), ಶಹಾಪುರ, ಯಾದಗಿರಿ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗಳನ್ನು ಎಲ್.ವಿ.ಡಿ ಕಾಲೇಜಿನಲ್ಲಿ ನಡೆಸಲಾಗುವುದು. ಉಳಿದಂತೆ ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನವಿ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಎಸ್.ಆರ್.ಪಿ.ಎಸ್ ಕಾಲೇಜಿನಲ್ಲಿ ಎಣಿಕೆ ಮಾಡಲಾಗುವುದು ಎಂದರು.
ಮತ ಎಣಿಕೆ ಕೋಣೆಗೆ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು, ಸೂಕ್ಷ್ಮ ವೀಕ್ಷಕರು, ಚುನಾವಣೆ ಆಯೋಗವು ಸೂಚಿಸಿರುವ ಅಧಿಕೃತ ವ್ಯಕ್ತಿಗಳು, ಚುನಾವಣೆಗೆ ಸಂಬಂಧಿಸಿದ ಕರ್ತವ್ಯದ ಮೇಲಿರುವ ಸರ್ಕಾರಿ ನೌಕರರು, ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರುಗಳು ಮತ್ತು ಮತ ಎಣಿಕೆ ಏಜೆಂಟರುಗಳಿಗೆ ಮಾತ್ರ ಅನುಮತಿಸಲಾಗುವುದು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.