ಬೆಂಗಳೂರು:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರುವ ವೇಳೆ ಸರ್ಕಾರ ರಜೆ ಘೋಷಣೆ ಮಾಡಬೇಕು ಎನ್ನುವ ಪ್ರತಿಪಕ್ಷ ನಾಯಕರ ಮನವಿ ಗಮನಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೇ ಸಿಎಂಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದು ಸರ್ಕಾರಿ ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ.
''500 ವರ್ಷಗಳ ಹೋರಾಟ, ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22ರಂದು ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ದಿನದಂದು ಪ್ರತಿ ಮನೆಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದೀಪ ಬೆಳಗುವುದು, ಭಜನೆ, ಶ್ರೀರಾಮನ ಆರಾಧನೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಸಂಭ್ರಮ, ಸಡಗರದ ಆಚರಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದಾರೆ. ರಾಜ್ಯದಲ್ಲೂ ದೊಡ್ಡ ಮಟ್ಟದ ಆಚರಣೆ ನಡೆಯುತ್ತಿದ್ದು, ಆ ದಿನ ಕೆಲಸ ಮಾಡುವುದರಿಂದ ಆಚರಣೆಗೆ ತೊಡಕು ಉಂಟಾಗಬಹುದು. ಆದ್ದರಿಂದ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಾರ್ವಜನಿಕ ಉದ್ದಿಮೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅನುಕೂಲವಾಗುವಂತೆ ಜನವರಿ 22 ರಂದು ಒಂದು ದಿನದ ಮಟ್ಟಿಗೆ ಸರ್ಕಾರಿ ರಜೆ ಘೋಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ'' ಎಂದು ಆರ್.ಅಶೋಕ್ ಪತ್ರ ಬರೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಆರ್.ಅಶೋಕ್, ''ಇಡೀ ದೇಶವೇ ಕಾತುರದಿಂದ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಕಾಯುತ್ತಿದೆ. ಹಿಂದೆ ಸೋಮನಾಥ ದೇವಾಲಯ ಪಟೇಲರು ನಿರ್ಮಾಣ ಮಾಡಿದ್ದರು. ಈಗ ಮೋದಿ ಅವರು ಅದೇ ರೀತಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಕರ್ನಾಟಕದಲ್ಲಿ ಕೂಡ ತಯಾರಾಗಿದೆ. ದೇವಸ್ಥಾನ ಸ್ವಚ್ಛ ಮಾಡಿ ಪೂಜೆಗೆ ತಯಾರಾಗಿದೆ. ಧ್ವಜಗಳನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದೆ. ನಾವು ಕೂಡ ಪ್ರತಿಪಕ್ಷ ನಾಯಕನಾಗಿ ಕರ್ನಾಟಕ ಜನರ ಭಾವನೆ ಗೌರವಿಸುತ್ತೇವೆ. ಇಲ್ಲಿ ಕೂಡ ಪೂಜೆ ನೋಡಲು ಅರ್ಧ ದಿನ ರಜೆ ಘೋಷಣೆಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ'' ಎಂದರು.
''ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ನೋಡದೇ ರಜೆಗಾಗಿ ಯಾರೂ ಪತ್ರ ಕೊಟ್ಟಿಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನಾನು ಪತ್ರವನ್ನು ಬರೆದಿದ್ದೇನೆ. ಪತ್ರವನ್ನ ಸಿಎಂಗೆ ಕಳಿಸುತ್ತಿದ್ದೇನೆ. ಯಾವುದೇ ರೀತಿ ಆಚರಣೆಗೆ ತೊಂದರೆ ಆಗದಂತೆ, ತಾವು ರಜೆ ಘೋಷಣೆ ಮಾಡಬೇಕು. ಹಿಂದೂಗಳ ಭಾವನೆಗೆ ಧಕ್ಕೆಬಾರದಂತೆ ರಜೆ ಘೋಷಣೆ ಮಾಡಬೇಕು. ಪತ್ರ ಕೇಳಿದ್ದೀರಿ, ಪತ್ರ ಕೊಡುತ್ತಿದ್ದೇನೆ. ಮುಂದೆ ಚೆಂಡು ನಿಮ್ಮ ಅಂಗಳದಲ್ಲಿದೆ. ಹಿಂದೂ ವಿರೋಧಿ ಅನ್ನೋದು ಇತಿಹಾಸ ಪುಟ ಸೇರಬಾರದು. ಕೂಡಲೇ ರಜೆ ಘೋಷಣೆ ಮಾಡಿ'' ಎಂದು ಒತ್ತಾಯಿಸಿದರು.
''ಶಾಲೆಗಳಿಗೆ ಮಕ್ಕಳು ಗೈರು ಹಾಜರಾದರೆ ಶಿಕ್ಷೆ ಕೊಡುತ್ತೇವೆ. ಸಾವಿರ ರೂಪಾಯಿ ಫೈನ್ ಹಾಕುತ್ತೇವೆ ಅಂತ ಶಾಲೆಯೊಂದರ ಆಡಳಿತ ತಿಳಿಸಿದೆೆ. ಅತಿರೇಕದ ಪ್ರವೃತ್ತಿ ಸರಿಯಲ್ಲ.ಈ ರೀತಿ ಮಾಡುವವರಿಗೆ ಪಾಠ ಕಲಿಸಬೇಕಾಗಲಿದೆ. ಪೋಷಕರು ಈಗಾಗಲೇ ತಿರುಗಿ ಬಿದ್ದಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ನೀವು ಪರಿಣಾಮ ಎದುರಿಸಬೇಕಾಗಲಿದೆ'' ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಶ್ರೀರಾಮನ ನೇತ್ರಗಳು ಕಾಣಿಸುವ ವಿಗ್ರಹವು ನಿಜವಾದುದ್ದಲ್ಲ: ಅಯೋಧ್ಯೆ ಪ್ರಧಾನ ಅರ್ಚಕ