ಬೆಂಗಳೂರು: ಜಗದೀಶ ಶೆಟ್ಟರ್ ಬಿಜೆಪಿಗೆ ಬಂದಿರುವುದೇನೂ ಆಪರೇಷನ್ ಕಮಲ ಅಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣವನ್ನು ತಡೆದುಕೊಳ್ಳಲಾರದೇ ಶೆಟ್ಟರ್ ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇನೂ ಆಪರೇಷನ್ ಕಮಲ ಅಲ್ಲ. ಜಗದೀಶ ಶೆಟ್ಟರ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದಿದ್ದಾರೆ. ಅವರು ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಏಕಾಏಕಿ ಸೇರಿಬಿಟ್ಟಿದ್ದರು. ರಾಮ ನವಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತೆ ಆಗಿತ್ತು. ಮುಸ್ಲಿಮರ ಓಲೈಕೆ ಹಾಗೂ ಹಿಂದೂಗಳ ಕಡೆಗಣನೆಯನ್ನು ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು. ಶೆಟ್ಟರ್ ಅವರು ಮರಳಿ ಗೂಡಿಗೆ ಬಂದಿರುವುದನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದೇವೆ ಎಂದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮೊದಲಾದ ಕಾರಣಗಳಿಂದ ಇನ್ನಷ್ಟು ನಾಯಕರು ಬಿಜೆಪಿ ಕಡೆ ಬರಲಿದ್ದಾರೆ. ಇನ್ನೇನಿದ್ದರೂ ಕಾಂಗ್ರೆಸ್ ಚೋಡೊ ಎಂಬ ಘೋಷಣೆ ಕೇಳಿ ಬರಲಿದೆ. ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿ ಅವರ ಪಕ್ಷ ಕಾಂಗ್ರೆಸ್ ನಾಲಾಯಕ್ ಎಂದು ಓಡಿಸಿದೆ. ಕಾಂಗ್ರೆಸ್ ಪಕ್ಷವನ್ನು ದೆಹಲಿಯಿಂದಲೂ ಹೊರಗೆ ಹಾಕಲಾಗುತ್ತದೆ. ಈ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದು ಹೇಳಿದರು.
ಬಿಜೆಪಿಯವರು ನಮ್ಮಲ್ಲಿಗೆ ಬಂದರು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರು. ಈಗ ಆ ಮಾತುಗಳು ನಿಲ್ಲಲಿದೆ. ಕಾಂಗ್ರೆಸ್ನಲ್ಲಿ ನಾಯಕರ ಗತಿ ಇಲ್ಲವಾಗಿರುವುದರಿಂದ ನಮ್ಮ ನಾಯಕರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದ ಅಶೋಕ್, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಜೆಪಿಯ ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಜಗದೀಶ್ ಶೆಟ್ಟರ್ ಆಗಮನ ಅತ್ಯಂತ ಸಂತೋಷ ತಂದಿದೆ. ಉತ್ತರ ಕರ್ನಾಟಕದ ಒಬ್ಬ ಪ್ರಭಾವಿ ಕಟ್ಟಾಳು. ಅವರ ತಂದೆ ಕಾಲದಿಂದಲೂ ಸಂಘದಲ್ಲಿದ್ದು, ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸಿ, ಸಿಎಂ ಆಗಿ ಬಿಜೆಪಿಗೆ ಕೊಡುಗೆ ನೀಡಿದ್ದಾರೆ, ಬೇರೆ ಬೇರೆ ಕಾರಣದಿಂದ ಅವರು ಕಾಂಗ್ರೆಸ್ ಸೇರಿದ್ದರು. ಹಲವು ದಿನಗಳಿಂದ ಬಿಜೆಪಿ ಸೇರ್ತಾರೆ ಅನ್ನೋ ವಿಚಾರ ಇತ್ತು.