ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದರೂ ಮತಕ್ಕಾಗಿ ರಾಜಕಾರಣ ಮಾಡದೇ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಂಡಿಸಿದ ಬಜೆಟ್ ಇದಾಗಿದೆ. ಮತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿಲ್ಲ. ದೇಶದ ಜನರ, ಮಧ್ಯಮ ವರ್ಗದವರ ದೃಷ್ಟಿಯಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪೂರಕ ಬಜೆಟ್ ಕೊಟ್ಟಿದ್ದಾರೆ. ಇದು ಬಡವರ ಪರವಾಗಿದೆ, ಅಭಿವೃದ್ಧಿಗೆ ಪೂರಕವಾಗಿದೆ, ತಂತ್ರಜ್ಞಾನ ಬಳಕೆಗೆ ಅನುಕೂಲಕರವಾಗಿದೆ ಮತ್ತು ಭಾರತದ ಏಳಿಗೆಗೆ ಪೂರಕವಾಗಿರುವ ಬಜೆಟ್. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಇದು ಪೂರಕ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಶಯದಂತೆ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
7 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ತೆರಿಗೆ ಇಲ್ಲದಿರುವುದು ಮಧ್ಯಮವರ್ಗಕ್ಕೆ ಪೂರಕವಾಗಿದೆ. ಸ್ವಸಹಾಯ ಮಹಿಳಾ ಗುಂಪುಗಳ 9 ಕೋಟಿ ಮಹಿಳೆಯರಿಗೆ ಅನುಕೂಲವಾಗಿದೆ. 1 ಕೋಟಿ ಮನೆಗಳಿಗೆ ಸೋಲಾರ್, ಗರ್ಭಕೋಶ ಕ್ಯಾನ್ಸರ್ಗೆ ಉಚಿತ ಲಸಿಕೆ, ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಯುಷ್ಮಾನ್ ಯೋಜನೆ, ಸಣ್ಣ ಆದಾಯ ಪಡೆಯುವವರಿಗೆ ಅನುಕೂಲಕರ ಯೋಜನೆ, ಮಧ್ಯಮವರ್ಗದವರಿಗೆ ಮನೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ, ರೈಲು ಸಂಚಾರದಟ್ಟಣೆ ತಗ್ಗಿಸಲು ನಾಲ್ಕು ಕಾರಿಡಾರ್, 517 ಹೊಸ ವಿಮಾನ ಮಾರ್ಗ, ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಣಕಾಸು ನೆರವು, ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶ ಇವು ಇಂದಿನ ಬಜೆಟ್ನ ಹೈಲೈಟ್ಸ್. ಇದರಿಂದ ನಮ್ಮ ದೇಶದ ಆರ್ಥಿಕತೆ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ. ಬಡ, ಮಧ್ಯಮವರ್ಗದವರಿಗೆ ಮನೆ ನಿರ್ಮಿಸಲು ಹೆಚ್ಚಿನ ಒತ್ತು ನೀಡಿದ ಆಶಾದಾಯ ಬಜೆಟ್ ಆಗಿದೆ ಎಂದರು.
ಒಟ್ಟಾರೆ ನಿರ್ಮಲಾ ಸಿತಾರಾಮನ್ ಅವರು ಮಂಡಿಸಿದ ಬಜೆಟ್ ಸ್ವಾಗತಾರ್ಗ. ಯಾವುದೇ ಗಿಮಿಕ್ ರಾಜಕಾರಣ ಮಾಡದೇ ಮುಂದಿನ ಜನಾಂಗಕ್ಕೆ ಉಪಯೋಗ ಆಗುವಂತಿದೆ. 2047ಕ್ಕೆ ಭಾರತ ಮೊದಲ ಸ್ಥಾನದಲ್ಲಿರಬೇಕು. ಈಗಾಗಲೇ ಬ್ರಿಟಿಷರ ದಾಟಿ ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ ಐದು ವರ್ಷದಲ್ಲಿ ಮೂರನೇ ಸ್ಥಾನದ ಗುರಿ ಇದೆ. ಅದಕ್ಕೆ ಪೂರಕ ಬಜೆಟ್ ಇದಾಗಿದ್ದು, ಇದನ್ನು ಸ್ವಾಗತಿಸಲಿದ್ದೇವೆ ಎಂದು ಹೇಳಿದರು.
ಕನ್ನಡ ಬೋರ್ಡ್ ಕಡ್ಡಾಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅಧಿವೇಶನ ಘೋಷಣೆಯಾದ ನಂತರ ಯಾವುದೇ ಬಿಲ್ಗೆ ಸಹಿ ಮಾಡುವ ಅವಕಾಶ ಸಂವಿಧಾನದಲ್ಲಿ ಇಲ್ಲ. ನಮ್ಮ ಸರ್ಕಾರದ ವೇಳೆಯಲ್ಲಿಯೂ ಈ ರೀತಿ ಆದ ಉದಾಹರಣೆ ಇದೆ. ಅಧಿವೇಶನ ಇಲ್ಲದೇ ಇದ್ದಾಗ ಮಾತ್ರ ಸಹಿ ಮಾಡುತ್ತಾರೆ. ಹಾಗಾಗಿ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದರು. ರಾಜ್ಯಕ್ಕೆ 50 ವರ್ಷಕ್ಕೆ ಬಡ್ಡಿ ರಹಿತ ಪ್ರವಾಸೋದ್ಯಮಕ್ಕೆ ಸಾಲ ಸೌಲಭ್ಯ, ರೈಲ್ವೆ, ವಿಮಾನ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ಇದರಲ್ಲೆಲ್ಲಾ ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ ಎಂದರು.