ಬೆಂಗಳೂರು: ಹಾಸನ ಪೆನ್ಡ್ರೈವ್ ವಿಡಿಯೋ ಪ್ರಕರಣದ ಕುರಿತು ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಕಾನೂನಿನಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ನ್ಯಾಯ ಸಿಗಬೇಕು ಎಂದಿದ್ದಾರೆ ನಮ್ಮ ನಿಲುವೂ ಕೂಡಾ ಅದೇ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಸಂಬಂಧಿಸಿದಂತೆ ಎಫ್ಐಆರ್ ದಾಖಲು ಆಗಿರುವುದನ್ನು ಗಮನಿಸಿದ್ದೇನೆ. ಈಗಾಗಲೇ ಇದರ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಅವರೂ ಮಾತನಾಡಿದ್ದಾರೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು, ಸರ್ಕಾರ ಎಸ್‌ಐಟಿ ರಚಿಸಿದೆ, ಕಾನೂನು ಪ್ರಕಾರ ಸರ್ಕಾರ ಕ್ರಮ ವಹಿಸಲಿದೆ, ಕುಮಾರಸ್ವಾಮಿ ನಿಲುವೇ ನಮ್ಮ ನಿಲುವಾಗಿದೆ ಎಂದರು.
ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು ಅನ್ನೋ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲ, ರಕ್ಷಣೆ ಕೊಡಲಿ ಹುಬ್ಬಳ್ಳಿ ನೇಹಾ ಪ್ರಕರಣ ನಡೆದಿದೆ, ಅಂಥವರಿಗೂ ರಕ್ಷಣೆ ಕೊಡಬೇಕು, ಇವರಿಗೂ ರಕ್ಷಣೆ ಕೊಡಲಿ ಎಲ್ಲರಿಗೂ ಸರ್ಕಾರ ರಕ್ಷಣೆ ಕೊಡಲಿ ಎಂದು ಹೇಳಿದರು.
ಹೆಚ್ಚು ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಕೋರ್ಟ್ಗೆ ಮೊರೆ ಹೋಗುವ ನಿರ್ಧಾರ ಮಾಡಿದೆ, ನಾನೂ ಕೂಡಾ ಅವರಿಗೆ ಇದನ್ನೇ ಆಗ್ರಹ ಮಾಡುತ್ತೇನೆ. ಸರ್ಕಾರ ಕೋರ್ಟಿನಲ್ಲಿ ಹೆಚ್ಚು ಪರಿಹಾರ ಕೊಡುವಂತೆ ಕೇಳಲಿ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಲಿ. ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಂದಿದೆ, ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ ಹೇಳಲಿ, ಈ ವಿಚಾರ ಕೇಳಿದರೆ ಇದರ ಬಗ್ಗೆ ಅವರು ಮಾತೇ ಆಡ್ತಿಲ್ಲ. ಅವರಿಗೆ ಬರ ಪರಿಹಾರ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ. ಕೋರ್ಟಿಗೆ ಹೋಗಲಿ, ಕೋರ್ಟಿನಲ್ಲಿ ಯಾರೆಷ್ಟು ಕೊಟ್ಟಿದ್ದಾರೆ ಅಂತ ಚರ್ಚೆ ಆಗುತ್ತದೆ ಸುಪ್ರೀಂಕೋರ್ಟ್ನಲ್ಲಿ ಸರ್ಕಾರಕ್ಕೆ ಛೀಮಾರಿ ಕಾದಿದೆ ಎಂದು ವಾಗ್ದಾಳಿ ನಡೆಸಿದರು.
ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಆರು ಗಂಟೆಗೆ ಸಾರ್ವಜನಿಕ ಸಭೆ ಮುಗಿಸಿ, ಹುಬ್ಬಳ್ಳಿಗೆ ಹೋಗ್ತೀನಿ. ಎರಡನೇ ಹಂತದ ಪ್ರಚಾರದಲ್ಲಿ ನಮ್ಮ ನಾಯಕರು ತೊಡಗಿಸಿಕೊಂಡಿದ್ದಾರೆ. ಮೋದಿ ಅವರು ಅಬ್ಬರದ ಪ್ರಚಾರ ನಡೆಸ್ತಿದ್ದಾರೆ. ಕೊನೆ ಕ್ಷಣದಲ್ಲಿಯೂ ಬಿಜೆಪಿ ಪ್ರಚಾರ ಮಾಡುತ್ತದೆ ಎಂದರು.
ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ:ನಂತರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ನಮ್ಮನ್ನ ಅಗಲಿದ್ದಾರೆ. ರಾಜಕೀಯ ರಂಗದಲ್ಲಿ, ಸಮಾಜಸೇವೆಯಲ್ಲಿ 50 ವರ್ಷಗಳ ಕಾಲ ಸೇವೆ ಮಾಡಿದವರು ಬಹಳ ಹಿರಿಯ ನಾಯಕರು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟವರು ದುರ್ಬಲ ವರ್ಗದ ಜನರ ದನಿಯಾಗಿದ್ದವರು ಧೀಮಂತ ನಾಯಕ ನಮ್ಮನ್ನ ಅಗಲಿದ್ದಾರೆ. ಅವರ ಕುಟುಂಬ, ಹಿತೈಷಿಗಳಿಗೆ, ಬೆಂಬಲಿಗರಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಆರ್ ಅಶೋಕ್ ಸಂತಾಪ ಸೂಚಿಸಿದರು.
ಇದನ್ನೂ ಓದಿ:'ದೇಶ ಅಭಿವೃದ್ಧಿ ಮಾಡುವಲ್ಲಿ ಮೋದಿ ಸಂಪೂರ್ಣ ವಿಫಲ': ಸಿಎಂ ಸಿದ್ದರಾಮಯ್ಯ - CM Siddaramaiah