ಬೆಂಗಳೂರು: ಅಧಿಕೃತ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ಸಾಂವಿಧಾನಿಕ ಹುದ್ದೆ ಹೊಂದಿದ್ದರೂ ಅಧಿಕೃತ ನಿವಾಸಕ್ಕಾಗಿ ಪ್ರಯಾಸ ಪಡಬೇಕಾಗಿದೆ. ಆರು ತಿಂಗಳಿನಿಂದ ನಿವಾಸ ಹಂಚಿಕೆಗೆ ಪತ್ರ ವ್ಯವಹಾರ ನಡೆಸುತ್ತಿರುವ ಅಶೋಕ್ ಅವರಿಗೆ ಇದುವರೆಗೂ ಸರ್ಕಾರಿ ನಿವಾಸ ಸಿಕ್ಕಿಲ್ಲ ಹಾಗಾಗಿ ಅಧಿಕೃತ ನಿವಾಸವಿಲ್ಲದೇ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ.
ಮುಖ್ಯಮಂತ್ರಿಗೆ ಸರಿಸಮಾನವಾದ ಸಾಂವಿಧಾನಿಕ ಹುದ್ದೆ ವಿರೋಧ ಪಕ್ಷದ ನಾಯಕನ ಸ್ಥಾನವಾಗಿದೆ. ಯಾವುದೇ ಸರ್ಕಾರ ಬಂದರೂ ವಿರೋಧ ಪಕ್ಷದ ನಾಯಕರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕುಮಾರಕೃಪಾ ಈಸ್ಟ್ ಬಂಗಲೆಯನ್ನು ಸಾಮಾನ್ಯವಾಗಿ ಪ್ರತಿಪಕ್ಷ ನಾಯಕರಿಗೆ ಹಂಚಿಕೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಬಿಟ್ಟರೆ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಹಂಚಿಕೆ ಮಾಡುವುದು ವಾಡಿಕೆ. ಆದರೆ ಈಗ ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ಗೆ ಈವರೆಗೂ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿಲ್ಲ, ಹಾಗಾಗಿ ಖಾಸಗಿ ನಿವಾಸದಿಂದಲೇ ಅಶೋಕ್ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗಿದೆ.
ನಿವಾಸಕ್ಕಾಗಿ ಪತ್ರ: ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆ ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ 2023ರ ನವೆಂಬರ್ನಲ್ಲಿ ಸರ್ಕಾರಕ್ಕೆ ಅಶೋಕ್ ಪತ್ರ ಬರೆದಿದ್ದರು. ಆದರೆ ನಿವಾಸ ಹಂಚಿಕೆ ಮಾಡುವ ಕೆಲಸ ಆಗಲೇ ಇಲ್ಲ, 2024ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆದ ಅಶೋಕ್ ಸರ್ಕಾರಿ ನಿವಾಸ ಹಂಚಿಕೆಗೆ ಮನವಿ ಮಾಡಿದರು. ಆದರೆ, ನಂತರ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಎಲ್ಲರೂ ಆ ಕಡೆ ಮುಖ ಮಾಡಿದರು, ಈಗ ಚುನಾವಣೆ ಮುಗಿದು ತಿಂಗಳಾದರೂ ಸರ್ಕಾರಿ ನಿವಾಸ ಹಂಚಿಕೆಗೆ ಸರ್ಕಾರ ಮುಂದಾಗಿಲ್ಲ. ಹಾಗಾಗಿ ಮೂರನೇ ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪತ್ರ ಬರೆದು ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ವಿಪಕ್ಷ ನಾಯಕನ ಮನವಿಗೆ ಸರ್ಕಾರ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದೆ. ಸರ್ಕಾರಿ ನಿವಾಸಕ್ಕೆ ಮನವಿ ಮಾಡಿದರೂ ಸ್ಪಂದನೆ ಮಾಡುತ್ತಿಲ್ಲ ಮೂರು ಬಾರಿ ಪತ್ರ ಬರೆದರೂ ಸರ್ಕಾರಿ ನಿವಾಸ ನೀಡದ ಸರ್ಕಾರ, ವಿರೋಧ ಪಕ್ಷದ ನಾಯಕರ ಪತ್ರಕ್ಕೆ ಮನ್ನಣೆ ನೀಡುತ್ತಿಲ್ಲ, ಯಾವುದಾದರು ಒಂದು ಸರ್ಕಾರಿ ನಿವಾಸ ನೀಡಿ ಎಂದು ಮುಖ್ಯ ಕಾರ್ಯದರ್ಶಿಗೆ ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸ ಅಥವಾ ಕುಮಾರಕೃಪಾ ನಿವಾಸಕ್ಕೆ ಅವರು ಮನವಿ ಮಾಡಿದ್ದಾರೆ.
ವಿಪಕ್ಷ ನಾಯಕನ ಮನವಿ: ನಂ.1 ಕುಮಾರಕೃಪಾ ಪೂರ್ವ ನಿವಾಸ, ನಂ.1 ರೇಸ್ ವ್ಯೂವ್ ಕಾಟೇಜ್, ನಂ.2 ರೇಸ್ ವ್ಯೂವ್ ಕಾಟೇಜ್ ಈ ಮೂರರಲ್ಲಿ ಒಂದು ನಿವಾಸಕ್ಕೆ ಅಶೋಕ್ ಮನವಿ ಸಲ್ಲಿಸಿದ್ದಾರೆ. ಆದರೆ ಕುಮಾರಕೃಪ ನಂಬರ್ 1 ನಿವಾಸ ಡಿಸಿಎಂ ಡಿಕೆ ಶಿವಕುಮಾರ್ಗೆ ಕೊಡಲಾಗಿದೆ. ರೇಸ್ ವ್ಯೂವ್ ಕಾಟೇಜ್-1 ಸಚಿವ ಎಂ.ಬಿ. ಪಾಟೀಲ್ ಅವರಿಗೆ ನೀಡಲಾಗಿದೆ, ರೇಸ್ ವ್ಯೂವ್ ಕಾಟೇಜ್-2 ಸಚಿವ ಕೆ.ಜೆ. ಜಾರ್ಜ್ ಅವರಿಗೆ ನೀಡಲಾಗಿದೆ, ಈಗ ವಿಪಕ್ಷ ನಾಯಕ ಅಶೋಕ್ ಅವರು ಕೇಳಿರುವ ಈ ನಿವಾಸ ಖಾಲಿ ಇಲ್ಲ ಹೀಗಾಗಿ ಮುಖ್ಯ ಕಾರ್ಯದರ್ಶಿಗಳಿಗೂ ತಲೆ ನೋವಾಗಿದೆ.
ಸಚಿವರನ್ನ ಖಾಲಿ ಮಾಡಿಸಿ ಅಶೋಕ್ಗೆ ನಿವಾಸ ಕೊಡಲು ಸಾಧ್ಯವಾಗುತ್ತಿಲ್ಲ, ಅಶೋಕ್ ಅವರಿಗೆ ಬೇರೆ ಯಾವುದೇ ನಿವಾಸದ ಮೇಲೆ ಆಸಕ್ತಿ ಇಲ್ಲ. ಜಯಮಹಲ್ ನಿವಾಸ ದೂರ ಎಂದು ನಿರಾಕರಿಸಿದ್ದಾರೆ. ಆದರೆ, ಸಿಎಂ ಸಮಾನ ಹುದ್ದೆಯಲ್ಲಿರುವ ಅಶೋಕ್ಗೆ ಸರ್ಕಾರಿ ನಿವಾಸ ಕೊಡಲೇಬೇಕು. ಕೇಳಿದ ನಿವಾಸ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ನವೆಂಬರ್ ನಿಂದ ಮನವಿ ಮಾಡುತ್ತಲೇ ಇದ್ದಾರೆ. ಆದರೂ ಅಶೋಕ್ ಮನವಿಯತ್ತ ಸರ್ಕಾರ ಮಾತ್ರ ಗಮನ ಹರಿಸುತ್ತಿಲ್ಲ.