ಕಲಬುರಗಿ: ಶಕ್ತಿ ಯೊಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆ ಅಗತ್ಯ ಸಾರಿಗೆ ಬಸ್ ಒದಗಿಸುವ ದೃಷ್ಠಿಯಿಂದ ಬರುವ ಮಾರ್ಚ್ ಅಂತ್ಯಕ್ಕೆ ರಾಜ್ಯದ ನಾಲ್ಕೂ ನಿಗಮಗಳಿಗೆ 5,800 ಬಸ್ ಖರೀದಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮುಖ್ಯಮಂತ್ರಿ ಚಿನ್ನದ ಪದಕ ವಿತರಣೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಕೆಕೆಆರ್ಡಿಬಿಯ 20 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಕೋಟೆ ಮಾದರಿಯ ನಗರ ಸಾರಿಗೆ ಬಸ್ ನಿಲ್ದಾಣವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಹೊರವಲಯದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಪ್ರಸ್ತಾವನೆಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನಿವೇಶನ ನೀಡಿದಲ್ಲಿ ಸ್ಯಾಟ್‍ಲೈಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆ ಶಕ್ತಿ ಯೋಜನೆ ಜಾರಿ ಮುನ್ನ ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಜನ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ನಂತರ 1.10 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಕುರಿತು ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಈಗ ಯೋಜನೆ ಜಾರಿಯಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ 139 ಕೋಟಿ ಜನ ಸಂಚಾರ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇದಾಗಿದೆ ಎಂದು ಬಣ್ಣಿಸಿದರು.
ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆ ಕೆಕೆಆರ್ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ)ಗೆ ಈಗಾಗಲೇ 630 ಬಸ್ ನೀಡಲಾಗಿದೆ. ಮುಂದಿನ ದಿನದಲ್ಲಿ ಮತ್ತೆ 485 ಬಸ್ ನೀಡಲಾಗುವುದು. ರಾಜ್ಯದಲ್ಲಿ 2016ರ ನಂತರ 13,888 ಜನ ನಿವೃತ್ತಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆದಿರಲಿಲ್ಲ. ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೆ ಚಾಲನೆ ನೀಡಿದ್ದೇವೆ. 9 ಸಾವಿರ ಸಿಬ್ಬಂದಿ ನೇಮಕಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ ಕೆಕೆಆರ್ಟಿಸಿ ಸಂಸ್ಥೆಯ 1,680 ನೇಮಕಾತಿ ಸೇರಿವೆ. 500 ಜನರಿಗೆ ಅನುಕಂಪ ಮೇಲೆ ಉದ್ಯೋಗ ನೀಡಲಾಗಿದೆ. ಕೆಎಸ್ಆರ್ಟಿಸಿ ಮತ್ತು ಕೆಕೆಆರ್ಟಿಸಿ ಸಂಸ್ಥೆಯಲ್ಲಿನ ಸಾರಿಗೆ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ 1 ಕೋಟಿ ರೂ. ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೆ ಮಾದರಿಯಾಗಿದೆ. ಒಂದೆಡೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು. ಇನ್ನೊಂದೆಡೆ ಕಾರ್ಮಿಕರ ಹಿತವು ಕಾಯಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ ಎಂದರು.
ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈಶಾನ್ಯ ಭಾಗದ ಜಿಲ್ಲೆಗಳು ಬೆಂಗಳೂರಿಗೆ 600 ಕಿ.ಮೀ. ದೂರದಲ್ಲಿರುವ ಕಾರಣ ಮತ್ತು ಓಡಾಟ ಹೆಚ್ಚಿರುವುದರಿಂದ ವೋಲ್ವೋ, ಎಸಿ ಬಸ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವಂತೆ ಎಂಡಿ ಅವರಿಗೆ ಸೂಚನೆ ನೀಡಿದ್ದೇನೆ. ಪರಿಣಾಮ ಇಂದಿಲ್ಲಿ ಎಸಿ/ನಾನ್ ಎಸಿ ಸ್ಲೀಪರ್ ಬಸ್‍ಗಳಿಗೆ ಚಾಲನೆ ನೀಡಿದ್ದೇವೆ ಎಂದರು. ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ ಕೂಡ ಮಾತನಾಡಿದರು.
ಮುಖ್ಯಮಂತ್ರಿ ಚಿನ್ನದ ಪದಕ ವಿತರಣೆ:ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 6 ಜನರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಕಲಬುರಗಿ ವಿಭಾಗ-1 ಹಾಗೂ 2ರ 121 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಭಾಗವಾಗಿ ಸಾಂಕೇತಿಕವಾಗಿ ಇಬ್ಬರಿಗೆ ಬೆಳ್ಳಿ ಪದಕ ವಿತರಿಸಲಾಯಿತು. ಇದಲ್ಲದೇ ಎಜಾಜ್ ಅಹ್ಮದ್, ರೇವಣಸಿದ್ದಪ್ಪ ಅವರಿಗೆ ಅನುಕಂಪದ ನೇಮಕಾತಿ ಅದೇಶ ಪತ್ರ ನೀಡಲಾಯಿತು. ನಿಗಮದಲ್ಲಿ ಸೇವಾ ಅವಧಿಯಲ್ಲಿ ಮೃತಪಟ್ಟ 8 ಜನ ಅಧಿಕಾರಿ - ಸಿಬ್ಬಂದಿ ಅವಲಂಬಿತರಿಗೆ ತಲಾ 10 ಲಕ್ಷ ರೂ.ಗಳಂತೆ ಒಟ್ಟು 80 ಲಕ್ಷ ರೂ. ಗಳ ಆಂತರಿಕ ಗುಂಪು ವಿಮಾ ಪರಿಹಾರದ ಚೆಕ್‍ಗಳನ್ನು ಸಹ ವಿತರಣೆ ಮಾಡಲಾಯಿತು. ಸಮಾರಂಭಕ್ಕೂ ಮುನ್ನ ಸಚಿವ ರಾಮಲಿಂಗಾರೆಡ್ಡಿ ಅವರು ಕಲ್ಯಾಣ ರಥ (ಎಸಿ ಸ್ಲೀಪರ್) ಮತ್ತು ಅಮೋಘವರ್ಷ (ನಾನ್ ಎಸಿ ಸ್ಲೀಪರ್) ಬಸ್ಗಳ ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ:ಮಕ್ಕಳನ್ನು ಆಕರ್ಷಿಸಲು ದೇವಗಿರಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಡಿಜಿಟಲ್ ಸ್ಪರ್ಶ; ಚಿಣ್ಣರಲ್ಲಿ ಹೆಚ್ಚಿದ ಕಲಿಕಾ ಆಸಕ್ತಿ