ಶಿವಮೊಗ್ಗ:ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ ಪಂಪ್ ಸ್ಟೋರೇಜ್ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕಾಗಿ 8,500 ಕೋಟಿ ರೂ. ವೆಚ್ಚ ಮಾಡಿ ಪಂಪ್ ಸ್ಟೋರೇಜ್ ನಿರ್ಮಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಶರಾವತಿ, ವರಾಹಿಯಲ್ಲೂ ಸಹ ಪಂಪ್ ಸ್ಟೋರೇಜ್: ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಿಂಗನಮಕ್ಕಿ ಅಣೆಕಟ್ಟೆಯಿಂದ ಜಲವಿದ್ಯುತ್ ಉತ್ಪಾದಿಸಿ ನೀರು ವಾಪಸ್ ನದಿಗೆ ಕಳುಹಿಸದೇ ಅದನ್ನು ಮರು ಬಳಕೆ ಮಾಡಲು ಪಂಪ್ ಸ್ಟೋರೇಜ್ ಮಾಡಲಾಗುತ್ತಿದೆ. ಇದರಿಂದ 24 ಗಂಟೆ ವಿದ್ಯುತ್ ಉತ್ಪಾದನೆ ಮಾಡಬಹುದು. ಶರಾವತಿ ಅಲ್ಲದೇ ವರಾಹಿಯಲ್ಲೂ ಸಹ ಪಂಪ್ ಸ್ಟೋರೇಜ್ ನಿರ್ಮಿಸಿ ಹೆಚ್ಚು ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಇರುವ ವಿದ್ಯುತ್ ಅಭಾವ ನೀಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
1.62 ಕೋಟಿ ಕುಟುಂಬಗಳಿಗೆ ನಿರಂತರ ವಿದ್ಯುತ್ ಕೊಡುತ್ತಿದ್ದೇವೆ. ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದೇವೆ. ಮೊದಲು ಮಳೆಗಾಲ ಬಂದಾಗ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳನ್ನು ನಾವು ವಾರ್ಷಿಕ ಮೆಂಟೆನೆನ್ಸ್ ಗಾಗಿ ಬಂದ್ ಮಾಡುತ್ತಿದ್ದೆವು. ಈ ವರ್ಷವೂ ಹಾಗೆ ಮಾಡಿದ್ದೆವು. ಆದರೆ ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಯಿತು. 16-17 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಕಳೆದ ವರ್ಷ 8-9 ಮೆಗಾವ್ಯಾಟ್ ಬೇಡಿಕೆ ಇತ್ತು. ಈ ವರ್ಷ ಅದು ದ್ವಿಗುಣವಾಯಿತು. ಇದರಿಂದ ರೈತರಿಗೆ 7 ಗಂಟೆ ಸತತ ವಿದ್ಯುತ್ ನೀಡುವುದನ್ನು ಈಗ 5 ಗಂಟೆಗೆ ಇಳಿಸಿದ್ದೇವೆ ಎಂದು ಸಚಿವರು ವಿವರಿಸಿದರು.
ಈಗ ವಿದ್ಯುತ್ ಅಭಾವವಿಲ್ಲ: ಕಳೆದ ಒಂದು ತಿಂಗಳಿನಿಂದ ಮತ್ತೆ 7 ಗಂಟೆ ತಡೆ ರಹಿತ ವಿದ್ಯುತ್ ನೀಡುತ್ತಿದ್ದೇವೆ. ನಮಗೆ ಈಗ ವಿದ್ಯುತ್ ಅಭಾವವಿಲ್ಲ. ಆದರೆ ಒಂದು ವೇಳೆ ವಿದ್ಯುತ್ ಅಭಾವ ಉಂಟಾದರೆ, ವಿದ್ಯುತ್ ಖರೀದಿಸಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ನಿರಂತರ ಜ್ಯೋತಿ ಕಳಪೆ ಕಾಮಗಾರಿ ತನಿಖೆ ನಡೆದು ವರದಿ ಬಂದರೆ, ಯಾರೇ ತಪ್ಪು ಮಾಡಿದರು ಸಹ ಅವರನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.