ಬೆಂಗಳೂರು: ವಾರಾಂತ್ಯದಲ್ಲಿ ಅವಧಿ ಮೀರಿ ಗ್ರಾಹಕರಿಗೆ ಅವಕಾಶ ನೀಡುತ್ತಿದ್ದ ಪಬ್, ರೆಸ್ಟೋರೆಂಟ್‌ಗಳಿಗೆ ತಡರಾತ್ರಿ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದರು. ಡಿಸಿಪಿ ಶೇಖರ್.ಹೆಚ್.ಟಿ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆ ಅವಧಿ ಮೀರಿ (ರಾತ್ರಿ 1ರ ನಂತರ) ವಹಿವಾಟಿನಲ್ಲಿ ತೊಡಗಿದ್ದ ಎಲ್ಲಾ ಪಬ್, ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಿಸಿದರು.
ಈ ಹಿಂದೆ ಅವಧಿ ಮೀರಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ ಸಹಿತ ಸುಮಾರು 15ಕ್ಕೂ ಅಧಿಕ ಪಬ್, ರೆಸ್ಟೋರೆಂಟ್‌ಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತಡರಾತ್ರಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಅನೇಕ ಕಡೆಗಳಲ್ಲಿ ಅತಿಯಾದ ಮ್ಯೂಸಿಕ್, ಓವರ್ ನೈಟ್ ಪಾರ್ಟಿಗೆ ಅವಕಾಶ ನೀಡುತ್ತಿರುವುದು ಕಂಡುಬಂದಿದೆ. ಕೆಲವೆಡೆ ಪೊಲೀಸರನ್ನು ನೋಡುತ್ತಿದ್ದಂತೆ ಪಬ್, ರೆಸ್ಟೋರೆಂಟ್ ಸಿಬ್ಬಂದಿಗಳು ಪಾರ್ಟಿಪ್ರಿಯರ ಮನವೊಲಿಸಿ ಕಳುಹಿಸಿ ಬಂದ್ ಮಾಡಿದ್ದಾರೆ.