ಕೊಪ್ಪಳ: "ಪರಶುರಾಮ್ ಸಾವಿನ ವಿಚಾರದಲ್ಲಿ ರಾಜಕೀಯ ಬದಿಗಿಡಬೇಕು. ಈ ಪ್ರಕರಣವನ್ನು ತಡಮಾಡದೇ ಸಿಬಿಐಗೆ ವಹಿಸಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ, ಪರುಶುರಾಮ್ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
"ಪರುಶುರಾಮ್ ಸಾವನ್ನಪ್ಪಿ ಇಂದಿಗೆ 11 ದಿನಗಳು ಕಳೆದಿವೆ. ಈ ಘಟನೆಗೆ ಕಾರಣರಾದ ಅಪರಾಧಿಗಳು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಅವರ ಬಂಧನವಾಗಿಲ್ಲ. ಈ ಕೂಡಲೇ ಆರೋಪಿಗಳ ಬಂಧನವಾಗಬೇಕು. ಪರಶುರಾಮ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಪರಶುರಾಮ್ ಪತ್ನಿಗೆ ಕೂಡಲೇ ಸರ್ಕಾರಿ ನೌಕರಿ ನೀಡಬೇಕು" ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
"ನಾವು ರಾಜಕೀಯ ತೀಟೆ ತೀರಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಇಲ್ಲದಿದ್ದರೆ ಪ್ರಕರಣ ಮುಚ್ಚಿ ಹಾಕುವ ಸಾಧ್ಯತೆ ಇದೆ. ಈ ಘಟನೆಯಲ್ಲಿ ಆಡಳಿತ ಪಕ್ಷದ ಶಾಸಕರದ್ದೇ ಕೈವಾಡ ಇರುವುದರಿಂದ ಸರ್ಕಾರ ಕ್ರಮ ಜರುಗಿಸಲು ಹಿಂದುಮುಂದು ನೋಡುತ್ತದೆ. ಸಂವಿಧಾನ, ಅಂಬೇಡ್ಕರ್ ಬಗ್ಗೆ ಸಿಎಂ ಭಾಷಣ ಮಾಡುತ್ತಾರೆ. ಅವರಿಗೇಕೆ ಈ ಕುಟುಂಬದ ರೋದನೆ ಅರ್ಥವಾಗುತ್ತಿಲ್ಲ. ಬೇಜವಾಬ್ದಾರಿ ಸರ್ಕಾರ ಯಾವ ರೀತಿ ನಡೆದುಕೊಳ್ಳಬಹುದು ಅನ್ನೋದನ್ನು ಈ ಘಟನೆಯಲ್ಲಿ ತೋರಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪೊಲೀಸ್ ಅಧಿಕಾರಿಗಳು ಕೂಡ ಒತ್ತಡಕ್ಕೊಳಗಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಮೀನಾಮೇಷ ಮಾಡುತ್ತಿರುವುದು ದುರ್ದೈವ" ಎಂದರು.
ಪಿಎಸ್ಐ ಪರಶುರಾಮ್ ಪ್ರಾಣಕ್ಕೆ ಬೆಲೆ ಇಲ್ಲವೇ?:"ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಅವರು ಇದು ಸಿಬಿಐಗೆ ಕೊಡುವಂತಹ ಪ್ರಕರಣ ಅಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರು ಮೊದಲು ಇಂತಹ ದುರಹಂಕಾರ, ಬೇಜವಾಬ್ದಾರಿ ಹೇಳಿಕೆ ನೀಡೋದನ್ನು ನಿಲ್ಲಿಸಬೇಕು. ಮೊದಲು ಈ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು" ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಇದನ್ನೂ ಓದಿ:ಪಿಎಸ್ಐ ಪರಶುರಾಮ್ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಲಿ: ಸಂಸದ ಜಗದೀಶ್ ಶೆಟ್ಟರ್ - PSI Parshuram Death Case