ಕರ್ನಾಟಕ

karnataka

ETV Bharat / state

ಅಂಜಲಿ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಕೋಳಿ ಬೆಸ್ತ ಸಮಾಜದ ಪ್ರತಿಭಟನೆ - Protest Against Anjali Murder

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಬೆಳಗಾವಿ, ಧಾರವಾಡದಲ್ಲಿ ಪ್ರತಿಭಟನೆ ನಡೆದಿದೆ.

Protest condemning Anjali case
ಅಂಜಲಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ (ETV Bharat)

By ETV Bharat Karnataka Team

Published : May 17, 2024, 2:21 PM IST

Updated : May 17, 2024, 2:33 PM IST

ಅಂಜಲಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ (ETV Bharat)

ಬೆಳಗಾವಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ನಡೆದ ಮತ್ತೋರ್ವ ವಿದ್ಯಾರ್ಥಿನಿ ಅಂಜಲಿ ಅಂಬಿಗೇರ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗಾವಿಯಲ್ಲಿ ಕೋಳಿ ಬೆಸ್ತ ಸಮಾಜದಿಂದ ಪ್ರತಿಭಟನೆ ನಡೆದಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಯಿತು.

ಚೆನ್ನಮ್ಮ ವೃತ್ತದಲ್ಲಿ ಕೋಳಿ ಬೆಸ್ತ ಸಮುದಾಯದ ನೂರಾರು ಜನರು ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ಹುಬ್ಬಳ್ಳಿಯಲ್ಲಿ ಇದು ಎರಡನೇ ಘಟನೆ. ಕಾಲೇಜು ವಿದ್ಯಾಭ್ಯಾಸದ ಜೊತೆ ಮನೆ ನಡೆಸಿಕೊಂಡು ಹೋಗುತ್ತಿದ್ದ ಅಂಜಲಿಯನ್ನು ಒಬ್ಬ ದುಷ್ಟ ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ?, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹಾಗಾಗಿ, ಇಂದು ಬೀದಿಗಿಳಿದು ನಮ್ಮ ಸಮಾಜದಿಂದ ಪ್ರತಿಭಟಿಸುತ್ತಿದ್ದೇವೆ. ಆರೋಪಿ‌ಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅದೇ ರೀತಿ ಅಂಜಲಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಉಪಮೇಯರ್ ಮಧುಶ್ರೀ ಪೂಜಾರಿ ಮಾತನಾಡಿ, ಅಂಜಲಿ ಅಂಬಿಗೇರ್ ನಮ್ಮ ಕೋಳಿ ಬೆಸ್ತ ಸಮಾಜದ ಮಗಳು. ನೇಹಾ ಹತ್ಯೆಯಾಗಿ ಒಂದು ತಿಂಗಳು ಕೂಡಾ ಆಗಿಲ್ಲ. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಘಟನೆ ನಡೆದಿದೆ. ಆರೋಪಿ ಅಂಜಲಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆತನಿಗೆ ಮರಣ ದಂಡನೆ ಶಿಕ್ಷೆ‌ ವಿಧಿಸಬೇಕು. ಇನ್ಮುಂದೆ ಈ ರೀತಿಯ ಘಟನೆಗಳು ಸಂಭವಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ, ಯುವತಿಯರಿಗೆ ಹೆಚ್ಚಿನ ಸಂರಕ್ಷಣೆ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ ಕುರದಂವಾಡೆ, ಮುಖಂಡರಾದ ಮಲ್ಲಪ್ಪ ಮುರಗೋಡ, ಸಿದಗೌಡ ಸುಣಗಾರ, ಧರೆಪ್ಪ ಪೂಜಾರ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.

ಅಂಜಲಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ (ETV Bharat)

ಧಾರವಾಡದಲ್ಲಿ ಪ್ರತಿಭಟನೆ: ಆರೋಪಿ ಗಿರೀಶನ ಎನ್‌ಕೌಂಟರ್‌ಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ನೇಹಾ ಹತ್ಯೆ ಬಳಿಕ ಈತ ನೇಹಾಳಂತೆ ಕೊಲೆ ಮಾಡುವೆ ಎಂದು ಹೇಳಿ ಕೊಲೆಗೈದಿದ್ದಾನೆ. ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಕೊಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅವಳಿ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ:ರೈಲಿನಲ್ಲಿ ಚಾಕು ಇರಿತ ಪ್ರಕರಣ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಐಜಿ ಶರಣಪ್ಪ - Train Stabbing Case

Last Updated : May 17, 2024, 2:33 PM IST

ABOUT THE AUTHOR

...view details