ಮಂಗಳೂರು : ಜೆರೋಸಾ ಶಾಲೆಯಲ್ಲಿ ಧಾರ್ಮಿಕ ನಿಂದನೆಯ ಆರೋಪದ ನಂತರದ ಬೆಳವಣಿಗೆಯಲ್ಲಿ ಶಾಸಕರು, ಕಾರ್ಪೊರೇಟರ್ಗಳು, ಹಿಂದೂ ಮುಖಂಡರುಗಳ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
ಜೆರೋಸಾ ಶಾಲೆಯ ಶಿಕ್ಷಕಿಯಿಂದ ಧಾರ್ಮಿಕ ನಿಂದನೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಯ ಮುಂಭಾಗ ಇತ್ತೀಚಿಗೆ ಪ್ರತಿಭಟನೆ ನಡೆದಿತ್ತು. ಈ ವೇಳೆ ಪ್ರತಿಭಟನೆ ಮಾಡಿದ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಹಾಗೂ ಹಿಂದು ಸಂಘಟನೆಗಳ ಮುಖಂಡರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಇಂದು ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆದಿತ್ತು. ಬಳಿಕ ಸುಳ್ಳು ಕೇಸನ್ನು ತೆಗೆದುಹಾಕಲು ಪೊಲೀಸ್ ಕಮಿಷನರ್ಗೆ ಮನವಿ ಮಾಡುತ್ತೇವೆಂದು ಹಿಂದೂ ಕಾರ್ಯಕರ್ತರು ಕಮಿಷನರ್ ಕಚೇರಿಯತ್ತ ಹೊರಟಿದ್ದಾರೆ. ಈ ವೇಳೆ ಮೊದಲೇ ಸನ್ನದ್ಧರಾಗಿದ್ದ ಪೊಲೀಸರು ಅಲ್ಲಿಯೇ ಬ್ಯಾರಿಕೇಡ್ ಹಾಕಿ ಪ್ರತಿಭಟನಾ ನಿರತರನ್ನು ತಡೆದಿದ್ದಾರೆ.
ಆಕ್ರೋಶಿತ ಹಿಂದೂ ಕಾರ್ಯಕರ್ತರು ಬ್ಯಾರಿಕೇಡ್ ಅನ್ನು ತಳ್ಳಿ ಮುಂದೆ ಹೋಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದಿದೆ. ರಸ್ತೆಗೆ ಬಿದ್ದವರನ್ನು ಪೊಲೀಸರು ಬಲವಂತವಾಗಿ ಪೊಲೀಸ್ ವ್ಯಾನ್ಗೆ ಎತ್ತಿ ಹಾಕಿದ್ದಾರೆ. ವಶಕ್ಕೆ ತೆಗೆದುಕೊಂಡ ಹಿಂದೂ ಕಾರ್ಯಕರ್ತರನ್ನು ನಾಲ್ಕು ಪೊಲೀಸ್ ವ್ಯಾನ್ಗಳು, ಮೂರ್ನಾಲ್ಕು ಪೊಲೀಸ್ ಜೀಪ್ಗಳಲ್ಲಿ ಕೊಂಡೊಯ್ದಿದ್ದಾರೆ. ಉಳಿದ ಕಾರ್ಯಕರ್ತರನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.