ಬೆಳಗಾವಿ: ವಿವಿಧ ಇಲಾಖೆಗಳ ತಾಂತ್ರಿಕ ಸಿಬ್ಬಂದಿಯ ಮಾದರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಳಗಾವಿ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದ್ದಾರೆ. ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಶಾಂತಿಯುತವಾಗಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಪಿ.ಶಿಂಧೆ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ನಾವು ತಾಂತ್ರಿಕವಾಗಿ ಅನುಭವ ಹೊಂದಿರುವ ಸಿಬ್ಬಂದಿಯಲ್ಲ. ಆದರೂ, ಸರ್ಕಾರ ವಹಿಸಿದ ತಾಂತ್ರಿಕ ಕೆಲಸಗಳನ್ನು ಮಾಡುತ್ತಿದ್ದೇವೆ. ನಾವು ಮೂಲಸೌಕರ್ಯ ವಿಚಾರವಾಗಿ ಕಡೆಗಣನೆಗೆ ಒಳಗಾಗಿದ್ದೇವೆ. ಹಾಗಾಗಿ, ಕೆಲಸಕ್ಕೆ ಸಾಮೂಹಿಕವಾಗಿ ರಜೆ ಹಾಕಿ ಧರಣಿ ಮಾಡುತ್ತಿದ್ದೇವೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಕಲ್ಪಿಸಬೇಕು. ಗುಣಮಟ್ಟದ ಪೀಠೋಪಕರಣಗಳು, ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸಬೇಕು. ಸಂಯೋಜನೆ, ಇ-ಆಫೀಸ್, ಗರುಡ, ಭೂಮಿ, ನವೋದಯ, ದಿಶಾಂಕ ಮತ್ತಿತರ ತಂತ್ರಾಂಶಗಳ ನಿರ್ವಹಣೆಗೆ ಹೆಚ್ಚಿನ ಡೇಟಾ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನಾನಿರತ ಸಿಬ್ಬಂದಿ ದಿವ್ಯಾ ಕಲಾದಗಿ ಮಾತನಾಡಿ, "15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ನಮಗೆ ಬಡ್ತಿ ಸಿಕ್ಕಿಲ್ಲ. ಬೇರೆ ಇಲಾಖೆಗಳ ಸಿಬ್ಬಂದಿಗೆ ಹೋಲಿಸಿದರೆ ನಮಗೆ ನಿರೀಕ್ಷೆಯಂತೆ ವೇತನವೂ ಇಲ್ಲ. ಹಾಗಾಗಿ ಸೇವಾಜ್ಯೇಷ್ಠತೆ ಆಧರಿಸಿ, ಅರ್ಹರಿಗೆ ತ್ವರಿತವಾಗಿ ಸೇವಾಬಡ್ತಿ ನೀಡಬೇಕು. ಇನ್ನು ಕೆಲಸದ ಒತ್ತಡದಲ್ಲಿ ಮನೆಯವರಿಗೆ ಸಮಯ ಕೊಡಲು ಆಗುತ್ತಿಲ್ಲ. ರಜಾ ದಿನಗಳಲ್ಲಿ ನಮ್ಮನ್ನು ಫ್ರೀ ಬಿಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದೆ ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹವನ್ನೂ ಮಾಡುತ್ತೇವೆ. ಕುಟುಂಬಸಮೇತ ಧರಣಿ ಕೂರುತ್ತೇವೆ" ಎಂದು ಎಚ್ಚರಿಸಿದರು.