ಬೆಂಗಳೂರು: ಅಸ್ಸೋಂನಲ್ಲಿ ರಾಹುಲ್ ಗಾಂಧಿ ನ್ಯಾಯ ಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇದೇ ವೇಳೆ, ಡಿ ಕೆ ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಮ್ಮ ಅಭಿಪ್ರಾಯ ಹೇಳಲು ಹಕ್ಕು ಕೊಟ್ಟಿದ್ದಾರೆ. ದೇಶದ ನ್ಯಾಯಕ್ಕೊಸ್ಕರ ರಾಹುಲ್ ಗಾಂಧಿ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದ ಹಾಗೆ. ಬಿಜೆಪಿಯವರಿಗೆ ಇಂಥ ಯಾತ್ರೆ ಮಾಡಲು ಆಗಿಲ್ಲ. ದೊಡ್ಡ ಯಾತ್ರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಆದರೆ, ಬಿಜೆಪಿ ಇದಕ್ಕೆ ಅಡ್ಡಿ ಪಡಿಸುತ್ತಿದೆ. ಇದರಿಂದ ದೇಶದಲ್ಲಿ ಸಂವಿಧಾನ ಬದುಕಿದೆಯಾ ಎಂಬ ಪ್ರಶ್ನೆ ಮೂಡಿದೆ. ಯಾತ್ರೆ ಬೆಂಬಲಕ್ಕೆ ನಾವು ಇಲ್ಲಿ ಸೇರಿದ್ದೇವೆ. ಯಾತ್ರೆಯಿಂದ ವಿಪಕ್ಷದವರಿಗೆ ಭಯ ಹುಟ್ಟಿದೆ ಎಂದರು.
ಅಧಿಕಾರ ಸಿಕ್ಕಿಲ್ಲ ಅಂತ ಬಿಜೆಪಿಯವರು ಸಂಕಟ ಪಡುತ್ತಿದ್ದಾರೆ. ಗ್ಯಾರಂಟಿ ನೋಡಿ ಭಯದಿಂದ ಏನೆಲ್ಲಾ ಹೊಂದಾಣಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕೆಡವಿತು. ಯಾರು ಅನ್ಯಾಯ ಮಾಡಿದ್ದಾರೆ ಅವರ ಜೊತೆ ಹೊಂದಾಣಿಕೆ ಮಾಡಿದ್ದಾರೆ. ಅನ್ನಭಾಗ್ಯ ಕೊಟ್ಟಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಅಕ್ಕಿಯಲ್ಲವಾ?. ಕಾಂಗ್ರೆಸ್ ಪಕ್ಷದ ಮಂತ್ರಾಕ್ಷತೆ ಅಲ್ಲವಾ?. ಇದು ಅಲ್ಲಿಂದ ಬಂತಾ?. ಕೈಯಲ್ಲಿ ಮಂತ್ರಾಕ್ಷತೆ, ಪಕ್ಕದಲ್ಲಿ ದೊಣ್ಣೆ ಇಟ್ಟುಕೊಂಡಿದ್ದಾರೆ. ಏಕೆ ಇದೆಲ್ಲಾ. ನಿಮ್ಮ ಕೇಸ್ಗಳಿಗೆ, ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ಹೇಳಿದರು.