ಕರ್ನಾಟಕ

karnataka

ETV Bharat / state

ತುಮಕೂರು: ಮಗ, ಸೊಸೆಯಿಂದ ಗೃಹಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ - ಗೃಹಬಂಧನ

ಮಗ, ಸೊಸೆಯಿಂದ ಗೃಹಬಂಧನದಲ್ಲಿದ್ದ ವೃದ್ಧೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ನೂರುನ್ನೀಸಾ ಹಾಗೂ ಪೊಲೀಸರ ಸಮ್ಮುಖದಲ್ಲಿ ರಕ್ಷಣೆ ಮಾಡಲಾಗಿದೆ.

house arrest  ವೃದ್ಧೆಯ ರಕ್ಷಣೆ  ಗೃಹಬಂಧನ  ಪೊಲೀಸರ ಸಮ್ಮುಖದಲ್ಲಿ ರಕ್ಷಣೆ
ಮಗ, ಸೊಸೆಯಿಂದ ಗೃಹಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ

By ETV Bharat Karnataka Team

Published : Feb 17, 2024, 2:24 PM IST

ಮಗ, ಸೊಸೆಯಿಂದ ಗೃಹಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ

ತುಮಕೂರು:ಕಳೆದ ಒಂದು ವರ್ಷದಿಂದ ಗೃಹ ಬಂಧನಕ್ಕೆ ಒಳಗಾಗಿದ್ದ ವೃದ್ಧೆಯನ್ನು ರಕ್ಷಣೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಿಂದ ಈ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ.

80 ವರ್ಷದ ವೃದ್ಧೆಯನ್ನು ಕಳೆದ ಒಂದು ವರ್ಷದಿಂದ ಮನೆಯಿಂದ ಹೊರಗೆ ಬಾರದಂತೆ ಮನೆಯ ಒಳಗೆ ಕೂಡಿಹಾಕಲಾಗಿತ್ತು. ಸೊಸೆ ಮತ್ತು ಮಗನಿಂದ ಆಗುತ್ತಿದ್ದ ತೊಂದರೆ ಕುರಿತು ವೃದ್ಧೆ ಕೆಲವರ ಬಳಿ ಅಳಲು ತೋಡಿಕೊಂಡಿದ್ದರು. ನಗರದ ಸಾಂತ್ವನ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್, ಹಿರಿಯ ನಾಗರಿಕರ ಸಹಾಯವಾಣಿಗೆ ಐದು ದಿನಗಳ ಹಿಂದೆ ವಿಷಯದ ಕುರಿತು ಕರೆ ಬಂದಿತ್ತು. ಈ ಕುರಿತು ಪರಿಶೀಲಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ವಿಳಾಸ ಪತ್ತೆ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ತಂಡವು ವೃದ್ಧೆಯನ್ನು ರಕ್ಷಿಸಿ ಕರೆತರಲು ಪ್ರಯತ್ನಿಸಿತು. ಆದರೆ ಕುಟುಂಬದಲ್ಲಿ ಸೊಸೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ನನ್ನನ್ನು ರಕ್ಷಿಸಿ ಎಂದು ವೃದ್ಧೆ ಅಂಗಲಾಚಿದ್ದರಿಂದ ಮನೆಯಿಂದ ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ವೃದ್ಧೆಯನ್ನು ಆಕೆಯ ಅಧಿಕೃತ ಆಶ್ರಯ ತಾಣಕ್ಕೆ ಸೇರಿಸುವ ಪ್ರಯತ್ನಪಟ್ಟರು. ಆದ್ರೆ, ಅದು ಸಾಧ್ಯವಾಗಿರಲಿಲ್ಲ. ತನ್ನ ಮನೆಗೆ ಹೋಗಿ ಅಲ್ಲಿಯೇ ಇರುತ್ತೇನೆ ಹಾಗೂ ತನಗೆ ರಕ್ಷಣೆ ಕೊಡಿಸಬೇಕು ಎಂದು ಮಹಿಳೆಯು ಕೋರಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ನೂರುನ್ನೀಸಾ ಮತ್ತು ಪೊಲೀಸರ ಸಮ್ಮುಖದಲ್ಲಿ ವೃದ್ಧೆ ವಾಸವಿದ್ದ ಮನೆಗೆ ತೆರಳಿ ಅಲ್ಲಿದ್ದ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿ ವೃದ್ಧೆಯನ್ನು ಆಕೆಯ ಸ್ವಂತ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ವೃದ್ಧೆಗೆ ಯಾವುದೇ ರೀತಿಯ ತೊಂದರೆ ನೀಡಿದರೆ, ಮಗ ಹಾಗೂ ಸೊಸೆ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯು ನಿವೃತ್ತ ಸಿಡಿಪಿಒ ಅಧಿಕಾರಿಯಾಗಿದ್ದಾರೆ. ಆಕೆಯ ಪತಿಯು ನಿವೃತ್ತ ASI ಆಗಿದ್ದು, ಆಕೆ ಸರ್ಕಾರಿ ಪಿಂಚಣಿ ಪಡೆಯುತ್ತಿದ್ದಾರೆ. ಆಕೆಯ ದೊಡ್ಡ ಮಗ ಮತ್ತು ಸೊಸೆ ಸೇರಿ ಆಕೆಯನ್ನು ಗೃಹಬಂಧನದಲ್ಲಿ ಇರಿಸಿದ್ದರು. ವೃದ್ಧೆ ಹೊರಗಡೆ ಎಲ್ಲಿಯೂ ಹೋಗದಂತೆ ಬಾಗಿಲಿಗೆ ಬೀಗ ಹಾಕಿದ್ದರು. ಸದ್ಯ ಗೃಹಬಂಧನದಿಂದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ:50 ಸಾವಿರಕ್ಕಿಂತ ಹೆಚ್ಚು ದಂಡವಿರುವ 80 ಬೈಕ್​​ ಸೀಜ್: 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪೆಂಡಿಂಗ್​

ABOUT THE AUTHOR

...view details