ದಾವಣಗೆರೆ: ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು ಈ ಸಂಬಂಧ ಕಾರಾಗೃಹದ ಅಧೀಕ್ಷಕಿ ಭಾಗೀರಥಿ, ಜೈಲರ್ ಕೆ.ಎಸ್.ಮಾನ್ವಿ ವಿರುದ್ದ ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 28ರಂದು ಕಾರಾಗೃಹದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಕಾರಾಗೃಹಕ್ಕೆ ಭೇಟಿ ನೀಡಿತ್ತು. ಈ ವೇಳೆ ನಿಷೇಧಿತ ವಸ್ತುಗಳು ದೊರೆತಿವೆ. ಕಾರಾಗೃಹದಿಂದಲೇ ನಿರಂತರವಾಗಿ ಖೈದಿಗಳು ಮೊಬೈಲ್ ಸಂಭಾಷಣೆ ಮಾಡಿದ್ದಾರೆ ಎಂದೂ ತಿಳಿದು ಬಂದಿದೆ.
ಶಿವಮೊಗ್ಗ ಕೇಂದ್ರ ಕಾರಗೃಹದ ಮುಖ್ಯ ಅಧೀಕ್ಷಕರಾದ ಡಾ.ಅನಿತ ಆರ್ ನೀಡಿದ ದೂರಿನನ್ವಯ ಐಪಿಸಿ ಮತ್ತ ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಹಾಗೂ ಕಾಲಂ 42, ಎನ್‌ಡಿಪಿಎಸ್ ಕಾಯ್ದೆ20(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ ವಿವರ:ಜ.28ರಂದು ದಾವಣಗೆರೆ ಕಾರಾಗೃಹದ ಖೈದಿಗಳ ನಡುವೆ ಘರ್ಷಣೆಯಾಗಿತ್ತು. ಈ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಹಾಗೂ ಜಿಲ್ಲಾ ಕಾರಾಗೃಹ ದಾವಣಗೆರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ದೂರು ನೀಡಲಾಗಿತ್ತು. ದೂರು ಅರ್ಜಿ, ದೂರವಾಣಿ ಸಂಭಾಷಣೆಯ ಪೆನ್ಡ್ರೈವ್ ವಿಷಯ ಕುರಿತಾಗಿ ಜ.30ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳೊಂದಿಗೆ ಭೇಟಿ ನೀಡಿ ಹಲ್ಲೆಗೊಳಗಾದವರನ್ನು ವಿಚಾರಣೆ ಮಾಡಲಾಗಿತ್ತು.
ಸುನೀಲ್ ಅಲಿಯಾಸ್ ತಮಿಳು ಸುನೀಲ್, ಪವನಕುಮಾರ್ ಅಲಿಯಾಸ್ ಪವನ್ ಡ್ಯಾನಿ, ಇಮ್ರಾನ್ ಖಾನ್ ಇಷ್ಟು ಜನರು ಮಾದಕ ದ್ರವ್ಯ ಸೇವನೆ ಮಾಡಿ ಇತರೆ ಖೈದಿಗಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಜ.30ರಂದು ರಕ್ತ ಮತ್ತು ಮೂತ್ರದ ಮಾದರಿಗಳನ್ನು ಜಿಲ್ಲಾಸ್ಪತ್ರೆಯ ತಜ್ಞರಿಂದ ಸಂಗ್ರಹಿಸಲಾಗಿತ್ತು. ತಜ್ಞರು ಮೇಲ್ಕಂಡ ಆರೋಪಿಗಳ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷಿಸಿ ಮಾದಕ ವಸ್ತು ಸೇವನೆ ಮಾಡಿರುವುದಾಗಿ ವರದಿ ನೀಡಿದ್ದರು.
ಖೈದಿಗಳು ಮಾದಕ ವಸ್ತು ಸೇವಿಸಿರುವ ಬಗ್ಗೆ ಪ್ರಭಾರ ಅಧೀಕ್ಷಕರಾದ ಭಾಗಿರಥಿ ಎಲ್., ಜೈಲರ್ ಕೆ.ಎಸ್.ಮಾನ್ವಿ ಇವರನ್ನು ವಿಚಾರಿಸಿದಾಗ ಈ ಬಗ್ಗೆ ತಿಳಿದಿಲ್ಲ ಎಂದು ಸಬೂಬು ಹೇಳಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಜ.31ರಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗು ತಂತ್ರಜ್ಞರೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದಾಗ ಮತ್ತೋರ್ವ ವಿಚಾರಣಾಧೀನ ಖೈದಿ (ಸಂಜೀತ್ ಸಿಂಗ್) ತಾನಾಗಿಯೇ ನ್ಯಾಯಾಧೀಶರ ಮುಂದೆ ಬಂದು ಮಾದಕ ವಸ್ತುಗಳನ್ನು ಇರಿಸಿದ್ದ ಜಾಗ ತೋರಿಸಿದ್ದ. ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಉಮಾಪ್ರಶಾಂತ್, ಕಾರಾಗೃಹದಲ್ಲಿ ನಿಷೇಧಿತ ಮಾದಕ ವಸ್ತುಗಳು ಸಿಕ್ಕಿರುವ ಬಗ್ಗೆ ಖಾತ್ರಿಪಡಿಸಿದ್ದಾರೆ. ಇದೇ ವೇಳೆ, 3.5 ಗ್ರಾಂ ಗಾಂಜಾ ಪತ್ತೆಯಾಗಿದೆ. ನಿನ್ನೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತ ಮಗನಿಂದಲೇ ತಾಯಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ತಂದೆ ರಕ್ಷಿಸಲು ತಾನೇ ಶರಣಾಗಿದ್ದ ಮಗ