ಕರ್ನಾಟಕ

karnataka

ETV Bharat / state

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಗೆ ಬಡ್ಡಿ ದಂಧೆಕೋರರ ಕಿರುಕುಳ: ಸಿಸಿಬಿಯಲ್ಲಿ ಎಫ್‌ಐಆರ್ - Pushkar Mallikarjunaiah - PUSHKAR MALLIKARJUNAIAH

ತಮಗೆ ಬಡ್ಡಿ ದಂಧೆಕೋರರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿನಿಮಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಸಹಕಾರ ಸಂಘದ ಉಪ ನಿಬಂಧಕರಿಗೆ ನೀಡಿರುವ ದೂರಿನನ್ವಯ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.

CCB
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) (ETV Bharat)

By ETV Bharat Karnataka Team

Published : Jun 28, 2024, 3:47 PM IST

ಬೆಂಗಳೂರು:ಕಿರಿಕ್ ಪಾರ್ಟಿ, ಗೋಧಿಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ, ಅವತಾರ್ ಪುರುಷ ಎಂಬಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ತಮಗೆ ಬಡ್ಡಿ ದಂಧೆಕೋರರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ಇದೀಗ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?: ಕೆಲವು ಸಿನಿಮಾಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದೆ ಹಾಗು ಕೋವಿಡ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ್ದ ಪುಷ್ಕರ್, 2019ರಲ್ಲಿ ತಮ್ಮ ಸಂಬಂಧಿ ಆದರ್ಶ್ ಡಿ.ಬಿ. ಎಂಬವರಿಂದ ಸಾಲ ಪಡೆದಿದ್ದರು. 2019ರಿಂದ 2023ರ ನವೆಂಬರ್‌ವರೆಗೆ ಹಂತ ಹಂತವಾಗಿ ಒಟ್ಟು 5 ಕೋಟಿ ರೂ ಪಡೆದಿದ್ದ ಪುಷ್ಕರ್, ಪ್ರತಿ ತಿಂಗಳು 5% ರಂತೆ ಬಡ್ಡಿ ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದರಂತೆ. ಭದ್ರತೆಗಾಗಿ ತಮ್ಮ ಖಾತೆಯ 10 ಖಾಲಿ ಚೆಕ್​ಗಳನ್ನು ನೀಡಿದ್ದರಂತೆ.

ತಾವು ಪಡೆದುಕೊಂಡಿದ್ದ 5 ಕೋಟಿ ರೂ.ಗೆ ಪ್ರತಿಯಾಗಿ ಅಸಲು, ಬಡ್ಡಿಸಮೇತ ಇದುವರೆಗೂ ಒಟ್ಟು 11.50 ಕೋಟಿ ರೂ. ಪಾವತಿಸಿದ್ದರಂತೆ. ಆದರೆ ಪಾವತಿಸಿರುವ ಹಣ ಕೇವಲ ಬಡ್ಡಿ ಹಾಗೂ ಚಕ್ರಬಡ್ಡಿಗೆ ಸರಿಯಾಗುತ್ತದೆ. ಇನ್ನೂ 13 ಕೋಟಿ ರೂ ನೀಡಬೇಕು ಎಂದು ಆದರ್ಶ್ ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ ಆದರ್ಶ್, ಹರ್ಷ ಸಿ, ಶಿವು, ಹರ್ಷ ಡಿ.ಬಿ. ಹಾಗೂ ಅವರ ಕೆಲವು ಸಹಚರರು ತಮ್ಮ ವಾಸದ ಮನೆ, ಕಚೇರಿಗಳಿಗೆ ಹುಡುಗರನ್ನು ಕಳುಹಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಪುಷ್ಕರ್ ಆರೋಪಿಸಿದ್ದಾರೆ.

ಆದರ್ಶ್ ಮತ್ತು ಹರ್ಷ ಸಿ, ಶಿವು, ಹರ್ಷ ಡಿ.ಬಿ. ಅವರು ಲೇವಾದೇವಿ ವ್ಯವಹಾರ ಮಾಡಲು ಸಹಕಾರ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದುಕೊಳ್ಳದೆ, ಸಾರ್ವಜನಿಕರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಪುಷ್ಕರ್, ಸಹಕಾರ ಸಂಘದ ಉಪ ನಿಬಂಧಕರಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಕಾನೂ‌ನು ತನಿಖೆ ನಡೆಸುವಂತೆ ಉಪ ನಿಬಂಧಕರಾದ ಕಿಶೋರ್ ಕುಮಾರ್ ಎಂಬವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳ ವಿರುದ್ಧ ಕರ್ನಾಟಕ ಮನಿ ಲೆಂಡರ್ಸ್ ಕಾಯಿದೆ, ಕರ್ನಾಟಕ ಪ್ರಹಿಬಿಷನ್ ಆಫ್ ಚಾರ್ಜಿಂಗ್ ಎಕ್ಸಾರ್ಬಿಟೇಶನ್ ಇಂಟರೆಸ್ಟ್ ಆ್ಯಕ್ಟ್, ವಂಚನೆ, ಜೀವ ಬೆದರಿಕೆ ಆರೋಪದಡಿ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಗಣಿನಾಡಿನಲ್ಲಿ ನಿರಂತರವಾಗಿ ಸಾಗಿದೆ ಬಡ್ಡಿ ವ್ಯವಹಾರ; ಮನಿ ಲೆಂಡರ್ಸ್​​​ಗೆ ಹಾಕಬೇಕಿದೆ ಕಡಿವಾಣ

ABOUT THE AUTHOR

...view details