ಕರ್ನಾಟಕ

karnataka

ETV Bharat / state

ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ - AGRICULTURAL LAND CONVERSION

ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸಲು ಭೂ ಪರಿವರ್ತನಾ ಅರ್ಜಿ ಹೇಗೆ ಸಲ್ಲಿಸಬೇಕು, ಬೇಕಿರುವ ದಾಖಲೆಗಳೇನು, ಭೂ ಪರಿವರ್ತನೆಯಿಂದಾಗುವ ಅನುಕೂಲಗಳೇನು ಎಂಬುದರ ಕುರಿತು ಮಾಹಿತಿ ನಮ್ಮ ಪ್ರತಿನಿಧಿ ಮುನೇಗೌಡ ಎಂ ಅವರ ವಿಶೇಷ ವರದಿ ಇಲ್ಲಿದೆ..

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Jan 11, 2025, 8:59 PM IST

ಬೆಂಗಳೂರು: ಕೃಷಿ ಭೂಮಿಯನ್ನು ಹೊಂದಿರುವವರು ಕೃಷಿಯೇತರ ಉದ್ದೇಶಕ್ಕಾಗಿ ಈ ಜಮೀನನ್ನು ಉಪಯೋಗ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರಡಿಯಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಪರಿವರ್ತಿಸವುದು ಕಾನೂನು ಪ್ರಕ್ರಿಯೆಯಾಗಿದೆ. ಪರಿವರ್ತನೆಗೊಂಡ ಕೃಷಿಯೇತರ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಬಹುದು. ಜಿಲ್ಲಾಧಿಕಾರಿಗಳು ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸಲು ಅಧಿಕಾರ ನೀಡುತ್ತಾರೆ.

ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸಲು, ಭೂಮಾಲೀಕರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಭೂ ಪರಿವರ್ತನೆ ಮಾಡಿಸಿಕೊಳ್ಳಲಿದ್ದರೆ, ಸಾಲ ಪಡೆಯಲು ಮತ್ತು ಕಟ್ಟಡ ಪರವಾನಗಿ ಪಡೆಯಲು ಕಷ್ಟವಾಗುತ್ತದೆ. ಕೃಷಿ ಭೂಮಿಯಲ್ಲಿ ವಸತಿ ಅಪಾರ್ಟ್​ಮೆಂಟ್ ಸೇರಿದಂತೆ​ ಯಾವುದೇ ನಿರ್ಮಾಣವನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ನಿರ್ಮಾಣದ ಮೊದಲು ಭೂ ಪರಿವರ್ತನೆ ಪ್ರಮಾಣಪತ್ರವನ್ನು ಪಡೆಯುವುದು ಮುಖ್ಯವಾಗಿದೆ.

ನಿಯಮವೇನಿದೆ ? ಹೊಸ ಬಡಾವಣೆ ನಿರ್ಮಾಣಕ್ಕೆ ಇಚ್ಛಿಸಿರುವ ರಿಯಲ್‌ ಎಸ್ಟೇಟ್ ಉದ್ಯಮಿಗಳಿಗೆ ಭೂ ಪರಿವರ್ತನೆ ಸರಳೀಕರಣ ಮಾಡಿ ಸರ್ಕಾರ ನಿಯಮ ರೂಪಿಸಿದೆ. ಸೂಕ್ತ ದಾಖಲೆ ಮತ್ತು ಶುಲ್ಕ ವಿಧಿಸಿ ಅರ್ಜಿ ಸಲ್ಲಿಸಿದರೆ ಕೆಲವೇ ದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅಂದರೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95 ಹಾಗೂ ಭೂ ಕಂದಾಯ ನಿಯಮ 1966ರ ನಿಯಮ 107ರಲ್ಲಿ ವಿಧಿಸಿರುವ ಷರತ್ತುಗಳ ಅನ್ವಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಭೂ ಮಾಲೀಕರ ಕಂದಾಯ ಭೂಮಿ ಅಥವಾ ಕೃಷಿ ಉದ್ದೇಶಕ್ಕೆ ಹೊಂದಿರುವ ಭೂಮಿಯ ಯಾವುದೇ ಭಾಗವನ್ನು ಯಾವುದೇ ಉದ್ದೇಶಕ್ಕಾಗಿ ಪರಿವರ್ತನೆಗೆ ಇಚ್ಛಿಸಿದರೆ ಆತ ಅಫಿಡವಿಟ್ ಜೊತೆಗೆ ಜಿಲ್ಲಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961 (1963ರ ಕರ್ನಾಟಕ ಅಧಿನಿಯಮ 11) ಉಪಬಂಧಗಳ ಮೇರೆಗೆ ಸಂಬಂಧಪಟ್ಟ ಭೂಮಿಯ ಮಾಸ್ಟರ್‌ ಪ್ಲಾನ್​ ಮತ್ತು ನಿರ್ದಿಷ್ಟಪಡಿಸಿದ ಬಳಕೆ ಅನುಸಾರವಾಗಿ ಬದಲಾವಣೆಯನ್ನು ಕೋರಿ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ನಿಯಮನುಸಾರ ಶುಲ್ಕ ಪಾವತಿಗೆ ಒಳಪಟ್ಟು ಅದನ್ನು ಬದಲಾಯಿಸಲಾಗುತ್ತದೆ.

ಆದರೆ, ಅರ್ಜಿಯ ಸ್ವೀಕೃತಿಯ ದಿನಾಂಕದಿಂದ 7 ದಿನಗಳ ಒಳಗಾಗಿ ಅನುಮೋದನೆ ಆದೇಶ ಹೊರಡಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಅರ್ಜಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗೊಳಗಾಗಿ ತನ್ನ ನಿರ್ಣಯವನ್ನು ನೀಡಲು ಜಿಲ್ಲಾಧಿಕಾರಿ ವಿಫಲವಾದರೆ, ಭೂ ಪರಿವರ್ತನೆಗೆ ಅನುಮೋದನೆ ನೀಡಿದ್ದಾರೆ ಎಂದು ಭಾವಿಸಲಾಗುತ್ತದೆ. ಅನಂತರ ನಿಯಮದ ಪ್ರಕಾರ ಶುಲ್ಕವನ್ನು ಪಡೆದು ಬಳಿಕ ಭೂ ಪರಿವರ್ತನೆ ಮಾಡಲು ಅವಕಾಶ ನೀಡಲಾಗಿದೆ.

ಮಾಸ್ಟ‌ರ್ ಪ್ಲಾನ್​ ಪ್ರಕಟಿಸದಿರುವ ಸಂದರ್ಭದಲ್ಲಿ ಅಥವಾ ಭೂಮಿಯು ಸ್ಥಳೀಯ ಯೋಜನಾ ಪ್ರದೇಶದ ಹೊರಗೆ ಬರುವಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ಅರ್ಜಿಯನ್ನು ಸ್ವೀಕರಿಸಿದ ದಿನದಿಂದ 15 ದಿನಗಳ ಒಳಗಾಗಿ ಅಭಿಪ್ರಾಯವನ್ನು ಸಲ್ಲಿಸಬೇಕು. ಜಿಲ್ಲಾಧಿಕಾರಿಯು ನಿಯಮಿಸಲಾದ ಶುಲ್ಕದ ಸಂದಾಯಕ್ಕೆ ಒಳಪಟ್ಟು ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಸಲ್ಲಿಸಿದ ಅಭಿಪ್ರಾಯಕ್ಕೆ ಒಳಪಟ್ಟು ಅರ್ಜಿಯ ಅನುಸಾರ ಭೂ ಬಳಕೆ ಬದಲಾವಣೆಗಾಗಿ ಅನುಮೋದನೆ ನೀಡಲಾಗುತ್ತದೆ.

ಸಕ್ಷಮ ಪ್ರಾಧಿಕಾರಗಳು, ಅರ್ಜಿ ಸ್ವೀಕರಿಸಿದ 15 ದಿನಗಳ ಒಳಗಾಗಿ ಅಭಿಪ್ರಾಯ ಸಲ್ಲಿಸದಿರುವ ವೇಳೆ ಅರ್ಜಿ ಅನುಸಾರ ಭೂ ಬಳಕೆ ಬದಲಾವಣೆಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ಭಾವಿಸಿ ಆದೇಶ ಹೊರಡಿಸಲು ಅವಕಾಶ ನೀಡಲಾಗುತ್ತದೆ.

ಜಿಲ್ಲಾಧಿಕಾರಿಯು, ಅರ್ಜಿಯ ಸ್ವೀಕೃತಿಯ ದಿನಾಂಕದಿಂದ 30 ದಿನಗಳ ಒಳಗೆ ತೀರ್ಮಾನ ನೀಡಲು ಮತ್ತು ಆದೇಶವನ್ನು ಹೊರಡಿಸಲು ವಿಫಲರಾದ ವೇಳೆ ಭೂ ಬಳಕೆ ಬದಲಾವಣೆಗಾಗಿ ಅನುಮೋದನೆ ನೀಡಿದ್ದಾರೆ ಎಂದು ಭಾವಿಸಲಾಗುತ್ತದೆ. ನಿಯಮನುಸಾರ ಶುಲ್ಕ ಪಡೆದು ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಪ್ರಕಾರ ಪ್ರಮಾಣೀಕರಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ಪರಿವರ್ತನೆ ಮಾಡಿರುವ ನಿವೇಶನಗಳಿಗೆ ಬೇಡಿಕೆ ಹೆಚ್ಚು : "ಭೂ ಪರಿವರ್ತನೆ ಮಾಡಿ ಬಡಾವಣೆ ನಿರ್ಮಾಣ ಮಾಡಿದರೆ ಅಂತಹ ನಿವೇಶನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕೂಡ ಹೆಚ್ಚಿರುತ್ತದೆ. ಕಂದಾಯ ಇಲಾಖೆ ಮತ್ತು ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆ ಮತ್ತು ನಕ್ಷೆ ಅನುಮೋದನೆ ಪಡೆದಿರುವ ಕಾರಣಕ್ಕೆ ಇಲ್ಲಿ ನಿವೇಶನ ಖರೀದಿ ಮಾಡುವವರಿಗೂ ಭದ್ರತೆ ಇರಲಿದೆ. ಬ್ಯಾಂಕ್ ಸಾಲ, ಮೂಲಸೌಕರ್ಯ ಎಲ್ಲವೂ ಸಿಗಲಿದೆ" ಎನ್ನುತ್ತಾರೆ ರಿಯಲ್ ಎಸ್ಟೇಟ್ ಏಜೆಂಟ್ ನಾಗೇಶ್.

ಅರ್ಜಿ ಸಲ್ಲಿಸುವುದೇಗೆ ? ಕಾನೂನಾತ್ಮಕ ಮಾಲೀಕತ್ವ ಹೊಂದಿದ ಜಮೀನಿನ ಮಾಲೀಕರು ಸಂಬಂಧಿಸಿದ ಕಂದಾಯ ಇಲಾಖೆಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ನಂತರ ಪರಿಶೀಲಿಸಿ ಸಂಬಂಧಿಸಿದ ನಗರ ಯೋಜನಾ ಇಲಾಖೆಯಿಂದ ಕೃಷಿಯೇತರ ಉದ್ದೇಶಕ್ಕಾಗಿ ಜಮೀನನ್ನು ಪರಿವರ್ತಿಸಲು ನಿರಾಕ್ಷೇಪಣಾ ಪತ್ರ/ತಾಂತ್ರಿಕ ಅಭಿಪ್ರಾಯ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು : ಅರ್ಜಿದಾರರು ಅರ್ಜಿಯೊಂದಿಗೆ ಜಮೀನಿನ ಭೂ ಪರಿವರ್ತನೆ ಸಂಬಂಧ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು. ಮಾಲೀಕತ್ವವನ್ನು ಖಚಿತಪಡಿಸಲು ಅರ್ಜಿದಾರರಿಂದ ಜಮೀನಿನ ಹಕ್ಕು ಪತ್ರ. ಕ್ರಯ ಪತ್ರ, ಸಾಲು ವಿಭಾಗಪತ್ರ, ಇತ್ತೀಚಿನ ಇಸಿ, ನಮೂನೆ-15 ಮತ್ತು 16 ಇತ್ತೀಚಿನ ಆರ್​ಟಿಸಿ (ಪಹಣೆ), ಮ್ಯುಟೇಶನ್ ಪ್ರತಿ, ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಿಸಿದ ಖಾತೆ ಪತ್ರ. ಎಲ್ಲಾ ಬದಿಗಳ ಅಳತೆಗಳುಳ್ಳ ನಮೂದಿಸಿದ ಸರ್ವೆಸ್ಕೆಚ್, ಗ್ರಾಮ ನಕ್ಷೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಿಸಿದ ಆಕಾರ್ ಬಂದ್, ಪ್ರಶ್ನಿತ ಜಮೀನಿನ ಅಂಚಿನಿಂದ 100.0 ಮೀ ವರೆಗಿನ ವಿವರಗಳನ್ನು ತೋರಿಸುವ ಸ್ಥಳ ನಕ್ಷೆ.

ಸಂಪರ್ಕ ರಸ್ತೆಯ ವಿವರಗಳು, ಅಂದರೆ ರಸ್ತೆಯ ವರ್ಗ, ಅಗಲ, ಎಲ್ಲಿಂದ ಎಲ್ಲಿಗೆ ಹೋಗುವ ರಸ್ತೆ ಇತ್ಯಾದಿ. ಪ್ರಶ್ನಿತ ಜಮೀನಿನ ಕ್ಷೇತ್ರವು 10 ಎಕರೆಗಿಂತ ಮೇಲ್ಪಟ್ಟಲ್ಲಿ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಕ್ಷೇಪಣಾ ಪತ್ರ (ಕೈಗಾರಿಕಾ ಉದ್ದೇಶದ ಪ್ರಕರಣಗಳಿಗೆ), ಇನ್ನು ಸಂಬಂಧಿಸಿದ ಇಲಾಖೆ/ಪ್ರಾಧಿಕಾರದಿಂದ ಭೂ-ಪರಿವರ್ತನೆಗೆ ನಿಗದಿತ ಶುಲ್ಕ ಪಾವತಿಸಿದ ನಂತರ, ಎಲ್ಲವನ್ನೂ ಪರಿಶೀಲಿಸಿದ ಬಳಿಕ ಸಂಬಂಧಿಸಿದ ಕಂದಾಯ ಇಲಾಖೆಯು ಕೆಲವೊಂದು ಷರತ್ತುಗಳನ್ನು ವಿಧಿಸಿ ಅರ್ಜಿದಾರರಿಗೆ ಭೂ ಪರಿವರ್ತನೆ ಆದೇಶವನ್ನು ನೀಡುತ್ತದೆ.

ಇದನ್ನೂ ಓದಿ:ಮೂರು ದಶಕ ಕಳೆದರೂ ಕೈಗೂಡದ ನೀರಾವರಿ ಕನಸು: ಸಿಂಗಟಾಲೂರು ಏತ ನೀರಾವರಿ ನಂಬಿದ್ದ ರೈತರಿಗೆ ನಿರಾಸೆ

ಇದನ್ನೂ ಓದಿ:17 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಫೆರಿಫೆರಲ್ ವರ್ತುಲ ರಸ್ತೆ ನಿರ್ಮಾಣದ ಸ್ಥಿತಿಗತಿ ಹೇಗಿದೆ?

ABOUT THE AUTHOR

...view details