ಹುಬ್ಬಳ್ಳಿ:ವಿಧಾನಸೌಧ ರಾಜ್ಯದ ಶಕ್ತಿ ಕೇಂದ್ರ. ರಾಜ್ಯಸಭಾ ಸದಸ್ಯರು ಇರುವ ವೇಳೆಯೇ ದೇಶದ್ರೋಹದ ಕೆಲಸವಾಗಿರುವುದನ್ನು ಖಂಡಿಸುವುದಾಗಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಮಂಗಳವಾರ ರಾಜ್ಯಸಭಾ ಫಲಿತಾಂಶ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಲಾಗಿದೆ. ಇದು ಖಂಡನೀಯ. ಈ ಬಗ್ಗೆ ಸ್ಪಷ್ಟೀಕರಣ ಕೇಳಿದರೂ ಪಾಕಿಸ್ತಾನ ಪರವಾದ ಘೋಷಣೆ ಕೇಳಿಯೇ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಮಾಧ್ಯಮದವರ ಮೇಲೆ ಕಿಡಿಕಾರುವ ಮನಸ್ಥಿತಿ ಬದಲಾಗಬೇಕು ಎಂದರು.
ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಅಲ್ಲಿನ ಜನರೇ ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಯಕರು ಆಗಬೇಕೆಂದು ಹೇಳುತ್ತಿದ್ದಾರೆ. ವಿಧಾನಸೌಧದಲ್ಲಿ ನಡೆದ ಘಟನೆಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಖಂಡಿಸಬೇಕು. ಘೋಷಣೆಯ ವಿಡಿಯೋ ರೆಕಾರ್ಡ್ ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಇಲ್ಲವಾದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಹರಿಹಾಯ್ದರು.