ಬೆಳಗಾವಿ :ಜೈ ಮಹಾರಾಷ್ಟ್ರ ಚೌಕ್ ಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟಿಸಿದರು. ಪಾಲಿಕೆ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಬೆಳಗಾವಿ ಮಹಾರಾಷ್ಟ್ರದಲ್ಲಿ ಇದೆಯೋ..? ಕರ್ನಾಟಕದಲ್ಲಿ ಇದೆಯೋ..? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ಬೆಳಗಾವಿಯ ಅನಗೋಳ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಎಂಇಎಸ್ ಕಾರ್ಯಕರ್ತರು ಜೈ ಮಹಾರಾಷ್ಟ್ರ ಚೌಕ್ ಫಲಕ ಹಾಕಿ, ಅದರ ಮೇಲೆ ಭಗವಾ ಧ್ವಜ ಹಾರಿಸಿದ್ದಾರೆ. ಇದನ್ನು ತೆರವುಗೊಳಿಸುವಂತೆ ಕನ್ನಡಪರ ಸಂಘಟನೆಗಳು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಇದರಿಂದ ಆಕ್ರೋಶಗೊಂಡ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಗುರುವಾರ ಬೆಳಗ್ಗೆ ಪಾಲಿಕೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಆದರೆ ಬೆಳಗಾವಿಯಲ್ಲಿ ಅನ್ಯ ರಾಜ್ಯದ ಪರ ಫಲಕ ಅಳವಡಿಸುವವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುವುದಿಲ್ಲ?. ನಿಮಗೆ ಕನ್ನಡ ಅಭಿಮಾನ ಇದೆಯೋ, ಇಲ್ಲವೋ..? ನಿಮ್ಮ ಜೊತೆ ನಾವು ಬರುತ್ತೇವೆ. ಆ ಫಲಕ ತೆಗೆಯೋಣ ಬನ್ನಿ ಎಂದು ಹೋರಾಟಗಾರರು ಆಗ್ರಹಿಸಿದರು.