ಬೆಳಗಾವಿ:ಒಂದೆಡೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ, ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ಹೆಸರಿನಲ್ಲಿ ಪ್ರತಿಭಟನೆಗೆ ಎಂಇಎಸ್ ಸಜ್ಜಾಗಿದೆ. ಇತ್ತ ಕನ್ನಡ ಹೋರಾಟಗಾರರು ಯಾವುದೇ ಕಾರಣಕ್ಕೂ ಮಹಾಮೇಳಾವ್‌ಗೆ ಅನುಮತಿ ಕೊಡದಂತೆ ಪಟ್ಟು ಹಿಡಿದಿದ್ದಾರೆ. ಇದೀಗ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಎಂಇಎಸ್ ನಿಷೇಧ ಹಾಗೂ ಗಡಿಯಲ್ಲಿ ಭಾಷಾ ವೈಷಮ್ಯ ಬಿತ್ತುವ ಎಂಇಎಸ್ ಮುಖಂಡರ ಗಡಿಪಾರಿಗೂ ಆಗ್ರಹಿಸಿದ್ದಾರೆ.
ಡಿ.9ರಿಂದ 19ರವರೆಗೆ ಚಳಿಗಾಲ ಅಧಿವೇಶನ ನಿಗದಿಯಾಗಿದೆ. ಮೊದಲ ದಿನವೇ ಮಹಾಮೇಳಾವ್ ನಡೆಸಲು ಅನುಮತಿ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಎಂಇಎಸ್ ಮುಖಂಡರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ ಇರುವಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಸರಿಯಲ್ಲ ಎಂದು ಎಂಇಎಸ್ ವಾದಿಸುತ್ತಿದೆ. ಅಲ್ಲದೇ, ಜಿಲ್ಲಾಡಳಿತ ಅನುಮತಿ ಕೊಡಲಿ, ಬಿಡಲಿ ಮಹಾಮೇಳಾವ್ ಮಾಡಿಯೇ ತಿರುತ್ತೇವೆ ಎನ್ನುತ್ತಿರುವುದು ಮತ್ತೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಎಂಇಎಸ್ ಮುಖಂಡರಿಗೆ ಮಹಾಮೇಳಾವ್ ಆಯೋಜಿಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಹಾಗಾಗಿ, ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿನ್ನೋಳಿಯಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಮತ್ತೆ ಅಧಿವೇಶನದ ಮೊದಲ ದಿನ ಮಹಾಮೇಳಾವ್‌ಗೆ ತಯಾರಿ ನಡೆಸಿದ್ದು, ಗುಪ್ತ ಸಭೆಗಳನ್ನು ಮಾಡಿರೋದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ.
'ಅನಾಹುತಕ್ಕೆ ಸರ್ಕಾರವೇ ಹೊಣೆ':ಈ ಕುರಿತುಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಈಟಿವಿ ಭಾರತದ ಜೊತೆಗೆ ಮಾತನಾಡಿ, ''ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಬೆಳಗಾವಿಗೆ ಬರುತ್ತಿರುವ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಎಂಇಎಸ್ ಮಹಾಮೇಳಾವ್‌ಗೆ ಸಿದ್ಧತೆ ನಡೆಸಿದೆ. ಈ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಕ್ಕೆ ಕೈ ಹಾಕಿರುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ, ಅವರನ್ನು ಗಡಿಪಾರು ಮಾಡಬೇಕು. ಮಹಾಮೇಳಾವ್ ನಡೆಸಲು ಅನುಮತಿ ನೀಡಿದರೆ ಕರವೇ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ'' ಎಂದು ಎಚ್ಚರಿಸಿದರು.