ಮಂಗಳೂರು:ಅನಕ್ಷರಸ್ಥ ಸಮಾಜಗಳ ಅಭಿವ್ಯಕ್ತಿ ಮಾಧ್ಯಮವೇ ಆದಿಮಕಲೆ. ಆದಿಮಕಲೆಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ರಚಿಸಿರುವ ಕಲಾತ್ಮಕ ಚಿತ್ರಗಳನ್ನು ವರ್ಣಚಿತ್ರಗಳೆಂದು, ನೈಸರ್ಗಿಕ ಬಂಡೆಕಲ್ಲುಗಳ ಮೇಲೆ ಕುಟ್ಟಿ, ಕೆತ್ತಿ ಮಾಡಿದ ಚಿತ್ರಗಳನ್ನು ಆದಿಮ ಬಂಡೆಕಲ್ಲು ಚಿತ್ರಗಳೆಂದು ಕರೆಯಲಾಗುತ್ತದೆ.
ಇದೇ ಮೊದಲ ಬಾರಿಗೆ ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ನೈಸರ್ಗಿಕ ಕಲ್ಲುಬಂಡೆಯ ಮೇಲೆ ಮಾನವ ಪಾದದ ಚಿತ್ರ ಕಂಡುಬಂದಿದೆ. ಸ್ಥಳೀಯರು ಈ ಪಾದದ ಚಿತ್ರ ಬಬ್ಬುಸ್ವಾಮಿಯ ಪಾದದ ಚಿತ್ರಗಳೆಂದು ನಂಬಿದ್ದಾರೆ ಎಂದು ಮುಲ್ಕಿ ಸುಂದರ್ರಾಮ್ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪಾದಗಳು ಒಂದು ಅಡಿ ಉದ್ದ, ಅರ್ಧ ಇಂಚು ಆಳವನ್ನು ಹೊಂದಿದ್ದು, ಸಾಮಾನ್ಯ ಮಾನವ ಪಾದಗಳ ಅಳತೆಯನ್ನು ಹೊಂದಿವೆ. ಬಬ್ಬುಸ್ವಾಮಿಯನ್ನು ಕೋಟೆದಬಬ್ಬು, ಕೋರ್ದಬ್ಬು, ಬಬ್ಬು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ.
ಪಡುಬಿದ್ರಿಯ ಮಿಂಚಿನಬಾವಿ ಕೋರ್ದಬ್ಬು ಟ್ರಸ್ಟ್ನ ಸಹಯೋಗದೊಂದಿಗೆ ಬಬ್ಬುಸ್ವಾಮಿ ಪುರಾತತ್ವ ಅಧ್ಯಯನ ಯೋಜನೆಯನ್ನು ಮಾರ್ಚ್ ತಿಂಗಳಲ್ಲಿ ಆರಂಭಿಸಲಾಯಿತು. ಈ ಅಧ್ಯಯನ ಯೋಜನೆಯ ಭಾಗವಾಗಿ ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿದಾಗ, ಈ ದೈವಸ್ಥಾನದ ಸಮೀಪ ಆದಿಮಕಲೆಯ ನಿವೇಶನ ಪತ್ತೆಯಾಯಿತು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬುದ್ಧನಜೆಡ್ಡು ಆದಿಮಕಲೆ ನಿವೇಶನದಲ್ಲಿ ಸುಮಾರು 20 ಪಾದದ ಚಿತ್ರಗಳು ಕಂಡುಬಂದಿವೆ. ನೂತನಶಿಲಾಯುಗ ಕಾಲದ ಚಿತ್ರಗಳಿಂದ ಇತಿಹಾಸ ಆರಂಭ ಕಾಲದ ವರೆಗಿನ ಚಿತ್ರಗಳನ್ನು ಅಲ್ಲಿ ಗುರುತಿಸಲಾಗಿದೆ.