ಬೆಳಗಾವಿ:ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಾರ್ವಜನಿಕ ಸಮಾವೇಶದ ಮೂಲಕ ಮತಬೇಟೆ ನಡೆಸಲಿದ್ದು, ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರದ ಅಖಾಡಕ್ಕೆ ಧುಮುಕಲಿರುವ ಪ್ರಧಾನಿ ಮೋದಿ ಏಪ್ರಿಲ್ 28ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶ ನಡೆಯುವ ಮುನ್ನಾ ದಿನವೇ ಬೆಳಗಾವಿಗೆ ಬರಲಿರುವ ಪ್ರಧಾನಿ ಮೋದಿ ಏಪ್ರಿಲ್ 27ರ ಸಂಜೆ 7.30ಕ್ಕೆ ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈಗಿರುವ ಮಾಹಿತಿ ಪ್ರಕಾರ ಮೋದಿ ಬೆಳಗಾವಿಯಲ್ಲೇ ರಾತ್ರಿ ಕಳೆಯಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅದು ಇನ್ನು ಅಧಿಕೃತ ಆಗಿಲ್ಲ.
ಒಂದು ವೇಳೆ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಭಾಗಿಯಾದರೇ, ಬೆಳಗಾವಿಯಲ್ಲಿ ವಾಸ್ತವ್ಯ ಹೂಡುತ್ತಿರುವ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಕಾಕತಿಯಲ್ಲಿ ಜೊಲ್ಲೆ ಗ್ರೂಪ್‌ನಿಂದ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದು, ಸುಮಾರು 5 ಏಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್ 116 ರೂಮ್ಗಳನ್ನು ಹೊಂದಿದ್ದು, ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿ ಆತಿಥ್ಯಕ್ಕೆ ಐಟಿಸಿ ವೆಲ್ಕಂ ಹೋಟೆಲ್ ಸಜ್ಜಾಗಿದೆ. ಎಸ್ಪಿಜಿ ಅಧಿಕಾರಿಗಳು ಹೋಟೆಲ್ ಅನ್ನು ಈಗಾಗಲೇ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸೇರಿ ಮತ್ತಿತರ ಅಧಿಕಾರಿಗಳು ಕೂಡ ಹೋಟೆಲ್ಗೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದರು.