ಕರ್ನಾಟಕ

karnataka

ETV Bharat / state

ದಸರಾ ಆನೆ ಅರ್ಜುನನ ನೆನಪು ಕಾಡುತ್ತಿದೆ: ಅರ್ಚಕ ಪ್ರಹ್ಲಾದ್‌ ರಾವ್ - Mysuru Dasara 2024 - MYSURU DASARA 2024

ಜಗತ್ಪ್ರಸಿದ್ಧ ದಸರಾ ವೈಭವಕ್ಕೆ ಮೆರುಗು ತಂದುಕೊಡುವುದೇ ಆನೆಗಳು. ಈ ವರ್ಷದ ನಾಡಹಬ್ಬಕ್ಕೆ ಗಜಪಯಣ ಆರಂಭವಾಗಿದೆ. ಈ ಸಂದರ್ಭದಲ್ಲಿ ಅರ್ಚಕರಾದ ಪ್ರಹ್ಲಾದ್ ರಾವ್ ಅವರು ದಸರಾ ಆನೆ ಅರ್ಜುನನ ಸಾವಿನ ಕುರಿತು ಬೇಸರ ವ್ಯಕ್ತಪಡಿಸಿದರು.

Priest Prahlad Rao
ಅರ್ಚಕ ಪ್ರಹ್ಲಾದ್‌ ರಾವ್‌ (ETV Bharat)

By ETV Bharat Karnataka Team

Published : Aug 21, 2024, 3:31 PM IST

Updated : Aug 21, 2024, 3:45 PM IST

ಅರ್ಚಕ ಪ್ರಹ್ಲಾದ್‌ ರಾವ್ ಮಾತನಾಡಿದರು (ETV Bharat)

ಮೈಸೂರು: ಕಾಡಿನ ಆನೆ ಶಿಬಿರಗಳಿಂದ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭಾಗವಹಿಸಲು ಅಭಿಮನ್ಯು ನೇತೃತ್ವದ 9 ಆನೆಗಳು ಗಜಪಯಣದ ಮೂಲಕ ಮೈಸೂರು ನಗರಕ್ಕೆ ಆಗಮಿಸಿವೆ. ಇದಕ್ಕೂ ಮುನ್ನ ಗಜಪಯಣಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಈ ಕುರಿತು ಅರ್ಚಕ ಪ್ರಹ್ಲಾದ್‌ ರಾವ್‌ 'ಈಟಿವಿ ಭಾರತ' ಜೊತೆಗೆ ಮಾತನಾಡಿ, ಅರ್ಜುನ ಆನೆಯ ಅಕಾಲಿಕ ಮರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ದಸರಾದ ಮೊದಲನೇ ಕಾರ್ಯಕ್ರಮವಾಗಿ ಕಾಡಿನಿಂದ ಆನೆಗಳನ್ನು ನಾಡಿಗೆ ಕರೆದುಕೊಂಡು ಬರಲಾಗುತ್ತದೆ. ಇದು ಪದ್ದತಿ. ನಾವು ಯಾವುದೇ ಒಂದು ಕೆಲಸ ಮಾಡಬೇಕಾದರೂ ಮೊದಲು ಗಣಪತಿಯನ್ನು‌ ಪ್ರಾರ್ಥಿಸುತ್ತೇವೆ. ಹಾಗೆಯೇ ಮೈಸೂರು ದಸರಾಕ್ಕೆ ಪ್ರತ್ಯಕ್ಷ ಗಣಪತಿ ಆಗಿರುವ ಆನೆಗಳಿಗೆ ಪ್ರಥಮ ಪೂಜೆಯನ್ನು ಇಂದು ಮಾಡಿದ್ದೇವೆ ಎಂದರು.

ಗಜಪಡೆಗೆ ಸಾಂಪ್ರದಾಯಿಕ ಪೂಜೆ (ETV Bharat)

ನವಗ್ರಹ ಸ್ವರೂಪವಾಗಿರುವ 9 ಆನೆಗಳನ್ನು ಪೂರ್ವ ದಿಕ್ಕಿಗೆ ನಿಲ್ಲಿಸಿ ಪೂಜೆ ಸಲ್ಲಿಸಿದೆವು. ಮೊದಲಿಗೆ ಸಂಕಲ್ಪ. ನಂತರ ಆನೆಗಳ ಕಾಲು ತೊಳೆದು ಅರಿಶಿಣ, ಕುಂಕುಮ, ಗಂಧ, ಅಕ್ಷತೆ‌, ಹೂ, ಗರಿಕೆ ಪತ್ರಗಳನ್ನಿಟ್ಟು ಪೂಜೆ ಮಾಡಿದೆವು. ಗಣಪತಿಗೆ ಇಷ್ಟವಾದ ಭಕ್ಷ್ಯ ಭೋಜನಗಳಾದ ಮೋದಕ, ಕರ್ಜಿಕಾಯಿ, ಚಕ್ಕಲಿ, ಕೋಡುಬಳೆಗಳನ್ನಿಟ್ಟು ನೈವೇದ್ಯ ಮಾಡಿ ಆನೆಗಳಿಗೆ ತಿನ್ನಿಸಿದ್ದೇವೆ. ಪಂಚಫಲಗಳನ್ನೂ ಇಟ್ಟು ಪೂಜೆ ಸಲ್ಲಿಸಿದ್ದೇವೆ ಎಂದು ವಿವರ ನೀಡಿದರು.

ಈ ಬಾರಿ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದು, ತುಂಬಾ ಸಂತೋಷವಾಗುತ್ತಿದೆ. ಆದರೆ ಒಂದು ಕಡೆ ನಮ್ಮ ಅರ್ಜುನ ಇಲ್ಲವಲ್ಲ ಎಂದು ಬೇಸರವಾಗುತ್ತದೆ. ಅದು ಎತ್ತರದ ದೊಡ್ಡ ಆನೆ. ಅದನ್ನು ನೋಡಲು ಖುಷಿಯಾಗುತ್ತಿತ್ತು. ನನ್ನ ಬಾಯಿಯಲ್ಲಿ‌ ಪೂಜೆ ಮಾಡುವಾಗ ಬರೀ ಅರ್ಜುನನ ಹೆಸರೇ ಬರುತ್ತಿತ್ತು ಎಂದು ತಿಳಿಸಿದ್ದಾರೆ.

ಇಂದು ಸಚಿವರ ಕೈಯಲ್ಲಿ ಪುಷ್ಪಾರ್ಚನೆ ಮಾಡಿಸಿ ಪೂಜೆ ಮಾಡಿಸಿದ್ದೇವೆ. ಹಿಂದಿನ ಕಾಲದಲ್ಲಿ ಆನೆಗಳನ್ನು ನಡೆಸಿಕೊಂಡು ಮೈಸೂರಿಗೆ ಬರಲಾಗುತ್ತಿತ್ತು. ಅದರಿಂದ ಆನೆಗಳಿಗೆ ತುಂಬಾ ನೋವಾಗುತ್ತಿತ್ತು. ಆದರೆ ಈಗ ಲಾರಿಯಲ್ಲಿ ಕರೆದುಕೊಂಡು ಬರಲಾಗುತ್ತಿದೆ ಎಂದರು.

ಶುಕ್ರವಾರ ಬೆಳಗ್ಗೆ 7ಕ್ಕೆ ಅರಣ್ಯ ಇಲಾಖೆಯವರು ಅರಮನೆಗೆ ಆನೆಗಳನ್ನು ಕಳುಹಿಸಿಕೊಡುತ್ತಾರೆ. ಅರಮನೆಯ ಪೂರ್ವ ಜಯಮಾರ್ತಂಡ ದ್ವಾರದಲ್ಲಿ ಬರಮಾಡಿಕೊಳ್ಳಲಾಗುತ್ತದೆ. ಬೆಳಗ್ಗೆ 10 ಗಂಟೆ 10 ನಿಮಿಷದಿಂದ 10.30ರ ಶುಭ ತುಲಾ ಲಗ್ನದಲ್ಲಿ ಪೂಜೆ ಮಾಡಿ ಸ್ವಾಗತ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ, ಬಲರಾಮ ಮತ್ತು ಅರ್ಜುನನ ಸಾವು ನನ್ನ ಮನಸ್ಸನ್ನು ಯಾವಾಗಲೂ ಕೊರೆಯುತ್ತಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ: ಮೊದಲ ಹಂತದ ಗಜಪಯಣಕ್ಕೆ ಸಚಿವರಿಂದ ಚಾಲನೆ - Flagged off to Gajapayan

Last Updated : Aug 21, 2024, 3:45 PM IST

ABOUT THE AUTHOR

...view details