ವಿಧಾನ ಪರಿಷತ್ ಶಿಕ್ಷಕರ ಚುನಾವಣೆಗೆ ಸಿದ್ಧತೆ ಬೆಂಗಳೂರು:ಶುಕ್ರವಾರ ನಡೆಯಲಿರುವ ವಿಧಾನ ಪರಿಷತ್‍ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿ ಇಂದು ಮಧ್ಯಾಹ್ನ ತಮ್ಮ ತಮ್ಮ ಮತಗಟ್ಟೆಗಳಿಗೆ ಮತಪೆಟ್ಟಿಗೆ, ಮತಪತ್ರ ಮತ್ತಿತರ ಚುನಾವಣಾ ಸಾಮಗ್ರಿಗಳೊಂದಿಗೆ ತೆರಳಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಮತದಾನ ನಡೆಯಲು ಅನುಕೂಲವಾಗುವಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪರಿಷತ್‍ನ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣದಲ್ಲಿ ಕಾಂಗ್ರೆಸ್‍ನಿಂದ ಪುಟ್ಟಣ್ಣ, ಎನ್‍ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಸೇರಿದಂತೆ 9 ಅಭ್ಯರ್ಥಿಗಳಿದ್ದಾರೆ.
ಫೆ.20ರಂದು ಮತ ಎಣಿಕೆ ಆರಂಭಗೊಳ್ಳಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಸೇರಿದ ನೋಂದಾಯಿತ ಶಿಕ್ಷಕರು ಮತದಾರರಾಗಿದ್ದಾರೆ. ಈ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 43 ಮತಗಟ್ಟೆಗಳನ್ನು ತೆರೆಯಲಾಗಿದೆ.
ವಿಶೇಷ ಸಾಂದರ್ಭಿಕ ರಜೆ: ಉಪ ಚುನಾವಣೆ ನಡೆಯುವ 3 ಜಿಲ್ಲೆಗಳ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಅರ್ಹ ಶಿಕ್ಷಕ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ನಾಳೆ ವಿಶೇಷ ಸಾಂದರ್ಭಿಕ ರಜೆ ನೀಡಿ, ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
''ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್ ತಾಲೂಕು ಪಂಚಾಯಿತಿಯಲ್ಲಿ ಎರಡು ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿರುವ 1087 ಮತದಾರರಿಗೆ ಮಾಹಿತಿ ನೀಡಲಾಗಿದೆ. ಮತದಾನಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಇರಲಿದೆ. ಮತದಾರರನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ. ಪೆನ್, ಮೊಬೈಲ್ ಮುಂತಾದ ವಸ್ತುಗಳನ್ನು ಮತಕೇಂದ್ರಕ್ಕೆ ತೆಗೆದುಕೊಂಡು ಬರದಂತೆ ಸೂಚನೆ ನೀಡಲಾಗಿದೆ'' ಎಂದು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ತಿಳಿಸಿದ್ದಾರೆ.
''ಮತ ಕೇಂದ್ರದ ಸಿಬ್ಬಂದಿ ಜೊತೆಗೆ ಚರ್ಚಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನೆಲಮಂಗಲ ಹೊಸಕೋಟೆ ಸೇರಿದಂತೆ 10 ಮತಕ್ಷೇತ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮತ ಕೇಂದ್ರಗಳಿರುವ ಸ್ಥಳಗಳಲ್ಲಿ 144 ಸೆಕ್ಷನ್ ಜಾರಿ ಆದೇಶ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆಯತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ'' ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಇದನ್ನೂ ಓದಿ :ಶಾಲೆಗಳಲ್ಲಿ ದ್ವಿ ಭಾಷಾ ವಿಭಾಗ ಕಾಲಮಿತಿಯಲ್ಲಿ ಆರಂಭ : ಸಚಿವ ಮಧುಬಂಗಾರಪ್ಪ