ರಾಮನಗರ :ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಶುಕ್ರವಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಶನಿವಾರ (ನ. 23ರಂದು) ಬೆಳಗ್ಗೆ 6.45ಕ್ಕೆ ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಗುವುದು. 7.30 ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭಿಸಲಾಗುವುದು. ಬೆಳಗ್ಗೆ 8 ಗಂಟೆಗೆ ಇವಿಎಂ ಯಂತ್ರಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಶೇ 88.81 ರಷ್ಟು ಅತೀ ಹೆಚ್ಚು ಮತದಾನ: ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಇನ್ನೆರಡು ಕೊಠಡಿಗಳಲ್ಲಿ ಇವಿಎಂ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,886 (ಶೇ. 88.81) ಮತಗಳು ಚಲಾವಣೆಗೊಂಡಿದೆ ಎಂದಿದ್ದಾರೆ.
14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿಯೊಂದು ಟೇಬಲ್‌ಗಳಿಗೂ ಎರಡು ರಾಜಕೀಯ ಪಕ್ಷದ ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಕ್ಷೇತರದ ಏಜೆಂಟರುಗಳಿಗೂ ಸಹ ಪಾಸ್‌ಗಳನ್ನು ನೀಡಲಾಗಿದೆ. ಟೇಬಲ್‌ವೈಸ್ ರಾಂಡಮ್ ಆಗಿ 27 ಜನರಿಗೆ ಪಾಸ್‌ಗಳನ್ನು ನೀಡಲಾಗಿದೆ ಎಂದರು.
ಮತ ಎಣಿಕೆಗೆ 69 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಜನ ಏಜೆಂಟರುಗಳು ಇರುತ್ತಾರೆ. ಬಿಗಿಯಾದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದು ಜಿಲ್ಲೆಯಾದ್ಯಂತ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಜಿದ್ದಾಜಿದ್ದಿ ಕಣವಾಗಿರುವ ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರ - ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸೋಲು ಗೆಲುವಿನ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಕಾಂಗ್ರೆಸ್‍ನಿಂದ ಮಾಜಿ ಸಚಿವ ಸಿ. ಪಿ ಯೋಗೇಶ್ವರ್ ಹಾಗೂ ಎನ್‍ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇವರಿಬ್ಬರಲ್ಲಿ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಸಾಕಷ್ಟು ಆರೋಪ, ಪ್ರತ್ಯಾರೋಪ, ಜಿದ್ದಾಜಿದ್ದಿ, ಹಣದ ಹೊಳೆಯನ್ನು ಕಂಡಿದ್ದ ಚುನಾವಣೆಯಲ್ಲಿ ಮತದಾರ ಯಾರ ಪರ ಮತಚಲಾಯಿಸಿದ್ದಾನೆ ಎಂಬುದು ಒಂದು ಕಡೆಯಾದರೆ, ಎರಡು ಪಕ್ಷದವರು ತಮ್ಮ ಅಭ್ಯರ್ಥಿಯ ಪರ ಬಾಜಿ ಕಟ್ಟುವಲ್ಲಿ ನಿರತರಾಗಿದ್ದಾರೆ.