ಕರ್ನಾಟಕ

karnataka

ETV Bharat / state

ರೈತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ; ಸಾಲ ಮನ್ನಾ, ರೈತರ ಮದುವೆಯಾಗುವ ಹೆಣ್ಣಿಗೆ ಪ್ರೋತ್ಸಾಹ ಧನ ನೀಡಲು ಮನವಿ - ಬಡಗಲಪುರ ನಾಗೇಂದ್ರ

ಸಿಎಂ ಸಿದ್ದರಾಮಯ್ಯ ಅವರು ಇಂದು ರಾಜ್ಯ ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂದಿಗೆ 2024-25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Feb 11, 2024, 5:26 PM IST

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

ಬೆಂಗಳೂರು : ರಾಜ್ಯ ಬಜೆಟ್​ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಹಾಗೂ ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಐದು ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿರುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ ರೈತ ಸಂಘ ಸಂಸ್ಥೆಗಳ ಸುಮಾರು 218 ಮಂದಿ ಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂದಿಗೆ 2024-25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು. ಈ ವೇಳೆ ಪಶುಸಂಗೋಪನೆ ಸಚಿವ ವೆಂಕಟೇಶ್, ಮುಖ್ಯಮಂತ್ರಿಗಳ ಸಲಹೆಗಾರ ಬಿ. ಆರ್ ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್, ರೈತ ಸಂಘಟನೆಗಳ ಮುಖಂಡರಾದ ಹೆಚ್. ಆರ್ ಬಸವರಾಜಪ್ಪ, ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರಾದ ಸುನಂದಾ ಜಯರಾಂ ಸೇರಿದಂತೆ ವಿವಿಧ ರೈತ ಸಂಘಟನೆಗಳ 218 ಮಂದಿ ಮುಖಂಡರು ಉಪಸ್ಥಿತರಿದ್ದರು.

ಸಾಲ ಮನ್ನಾ ಮಾಡಲು ಒತ್ತಾಯ : ಸಭೆ ಬಳಿಕ ಮಾತನಾಡಿದ ಬಡಗಲಪುರ ನಾಗೇಂದ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಮತ್ತು ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿ ನೀತಿಯನ್ನು ರೂಪಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕೃಷಿ ಇಂದು ದಿಕ್ಕು ತಪ್ಪಿದೆ. ಕೃಷಿಯನ್ನು ಉಳಿಸಲು ಬಜೆಟ್​ನಲ್ಲಿ ಹೆಚ್ಚಿನ ಒತ್ತು ಕೊಡಬೇಕು. ರೈತರ ಪರ ಬಜೆಟ್ ನೀಡಬೇಕು. ಲಭ್ಯ ಸಂಪನ್ಮೂಲದೊಳಗಡೆ ಏನೆಲ್ಲಾ ಸಾಧ್ಯವಿದೆಯೋ ಅದನ್ನು ಮಾಡಿ ಎಂದು ಮನವಿ ಮಾಡಿದ್ದೇವೆ. ಮುಖ್ಯವಾಗಿ ಬರದ ಸಮಸ್ಯೆ ಇದೆ. ಬರಕ್ಕೆ ಶಾಶ್ವತವಾಗಿ ಪರಿಹಾರ ಸಿಗಬೇಕಾದರೆ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. 10 ವರ್ಷದ ಕಾರ್ಯಯೋಜನೆಯನ್ನು ಘೋಷಿಸಬೇಕು ಎಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ರೈತರನ್ನು ಮದುವೆಯಾಗುವ ಕನ್ಯೆಯರಿಗೆ 5 ಲಕ್ಷ ರೂ. ನೀಡಿ: ಸಿಎಂ ಜೊತೆಗಿನ ಸಭೆಯಲ್ಲಿ ಕೃಷಿಕರ ಮಕ್ಕಳಿಗೆ ಕನ್ಯೆಯರು ಸಿಗುತ್ತಿಲ್ಲ. ಹೀಗಾಗಿ 45 ವರ್ಷವಾದರೂ ಮದುವೆ ಆಗುತ್ತಿಲ್ಲ. ಇದಕ್ಕೆ ಕಾರಣ ಕೃಷಿಗೆ ಆದ್ಯತೆ ಸಿಗುತ್ತಿಲ್ಲ. ಹೀಗಾಗಿ ರೈತರನ್ನು ಮದುವೆ ಆಗುವ ಕನ್ಯೆಯರಿಗೆ ಐದು ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ವಾಪಸ್ ಪಡೆದು ಮಾತು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತದೆ. ಈ ಬಗ್ಗೆ ಬಜೆಟ್​ನಲ್ಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ ಎಂದರು.

ಹೊಸದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ಎಲ್ಲಾ ಪರಿಕರಗಳ ವೆಚ್ಚವನ್ನು ರೈತರೇ ತುಂಬಬೇಕೆನ್ನುವ ಹೊಸ ನಿಯಮವನ್ನು ಹಿಂಪಡೆದು, ಹಿಂದಿನ ನಿಯಮದಂತೆ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಕರ ನಿರಾಕರಣ ಚಳವಳಿಯ ಭಾಗವಾಗಿ ಬಾಕಿ ಉಳಿದಿರುವ ರೈತರ ಗೃಹ ವಿದ್ಯುತ್ ಬಿಲ್​ಅನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಹಳೇ ಬಾಕಿ ಸಂಪೂರ್ಣ ಮನ್ನಾ ಮಾಡಬೇಕು : ಕಾಫಿ ಬೆಳೆಗಾರರಿಗೆ ಈ ಹಿಂದಿನ ಸರ್ಕಾರ 10 ಹೆಚ್​ಪಿ ತನಕ ಉಚಿತ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಿ, ಹಳೇ ಬಾಕಿ ಇರುವ ವಿದ್ಯುತ್ ಬಿಲ್‌ನ್ನು ರೈತರು ಪಾವತಿಸಿದ ನಂತರ ರೈತರ ಖಾತೆಗೆ ಸರ್ಕಾರ ತುಂಬುವುದಾಗಿ ಹೇಳಿತ್ತು. ಆದರೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ನಿಮ್ಮ ಸರ್ಕಾರ ಈ ತೀರ್ಮಾನವನ್ನು ಮಾರ್ಪಡಿಸಿ, ಎಲ್ಲಾ ರೈತರಿಗೂ ಸರಬರಾಜು ಮಾಡುವ ನೀತಿಯನ್ನು ಅನ್ವಯಿಸುವಂತೆ ಮಾಡಬೇಕು ಹಾಗೂ ಹಳೇ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಹಲವು ಬೇಡಿಕೆ ಇಟ್ಟಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಇದನ್ನೂ ಓದಿ :ಬಜೆಟ್​ನಲ್ಲಿ ಅನ್ನದಾತರ ನಿರೀಕ್ಷೆಗಳೇನು: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸಂದರ್ಶನ

ABOUT THE AUTHOR

...view details