ಉಡುಪಿ: ರಾಜ್ಯದ ಮೂರು ಕ್ಷೇತ್ರಗಳ ಚುನಾವಣೆ ಫಲಿತಾಂಶಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪತ್ನಿ, ಮಗಳು ಮತ್ತು ಆಪ್ತರೊಂದಿಗೆ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯಕ್ಕೆ ಒಳ್ಳೆಯದಾಗಿ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ. ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಅರ್ಪಿಸುವಂತ ಭಾಗ್ಯ ಸಿಗಲಿ. ಆ ತಾಯಿ ಅವಕಾಶ ಕೊಟ್ಟಿದ್ದಾಳೆ. ಅದಕ್ಕಾಗಿ ಕುಟುಂಬ ಸಮೇತರಾಗಿ ಬಂದಿದ್ದೇವೆ. ಇಡಗುಂಜಿ ಗಣಪತಿ ದೇವಾಲಯಕ್ಕೂ ಭೇಟಿ ನೀಡಲಿದ್ದೇನೆ. ಮುರ್ಡೇಶ್ವರದಲ್ಲಿ ಮೀನುಗಾರರ ಸಮಾವೇಶದಲ್ಲಿ ಕೂಡ ಭಾಗಿಯಾಗಲಿದ್ದೇನೆ. ಉಪ ಚುನಾವಣೆ ಫಲಿತಾಂಶದ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ, ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ, ಮಾಡುವ ಪ್ರಯತ್ನ ಮಾಡಿದ್ದೇವೆ ಫಲ ಕೊಡುವವನು ಭಗವಂತ" ಎಂದು ಹೇಳಿದರು.
"ಎಲ್ಲಾ ಕಡೆಯಲ್ಲೂ ದೇವರು ನಮಗೆ ಒಳ್ಳೆದು ಮಾಡುತ್ತಾರೆ. ಕರ್ನಾಟಕದಲ್ಲೂ, ಹರಿಯಾಣದಲ್ಲೂ ಸಮೀಕ್ಷೆ ನೀಡಿದ್ದರು. ಆದರೆ ಏನಾಯ್ತು? ನನಗೆ ಸಮೀಕ್ಷೆ ಬಗ್ಗೆ ಯಾವತ್ತೂ ನಂಬಿಕೆ ಇರುವುದಿಲ್ಲ. ಸಮೀಕ್ಷೆ ಕಟ್ಟಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಜನರ ಮನಸ್ಸನ್ನು ಗೆದ್ದವರು, ಜನರ ವಿಶ್ವಾಸ ಪಡೆದುಕೊಂಡವರು ಗೆಲ್ಲುತ್ತಾರೆ. ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ ಯಾವ ಬಿಪಿಎಲ್ ಅರ್ಹರಿಗೆ ಕೂಡಾ ಅನ್ಯಾಯ ಆಗಲು ನಮ್ಮ ಸರ್ಕಾರ, ನಮ್ಮ ಪಕ್ಷ ಬಿಡುವುದಿಲ್ಲ. ಕಾರ್ಡ್ ವಜಾ ಆಗಿರುವವರ ಪಟ್ಟಿ ನೀಡಿ, ಅರ್ಹರಿಗೆ ಕಾರ್ಡ್ ನೀಡಬೇಕು ಎಂದು ನಾವು ಈಗಾಗಲೇ ಮಂತ್ರಿಗಳಿಗೆ ಹೇಳಿದ್ದೇನೆ. ಪ್ರತಿ ತಾಲ್ಲೂಕಿನಲ್ಲಿ ಗ್ಯಾರಂಟಿ ಸಮಿತಿ ಇದೆ. ಇವರು ನ್ಯಾಯ ಕೊಡುವ ಕೆಲಸ ಮಾಡುತ್ತಾರೆ. ವಿರೋಧ ಪಕ್ಷಗಳಿಗೆ ಕೆಲಸ ಇಲ್ಲ. ಪಾಪ ಏನಾದರೂ ಮಾತನಾಡಬೇಕಲ್ಲ, ಅದಕ್ಕೆ ಮಾತನಾಡುತ್ತಿದ್ದಾರೆ" ಎಂದು ಟಾಂಗ್ ನೀಡಿದರು.