ಕರ್ನಾಟಕ

karnataka

ETV Bharat / state

ಚುನಾವಣಾ ಬಾಂಡ್ ಮೂಲಕ ಲಂಚ ಪಡೆದು ಜೀವಕ್ಕೆ ಹಾನಿಯಿರುವ ಔಷಧ ಪೂರೈಕೆಗೆ ಅವಕಾಶ: ಪ್ರಶಾಂತ್ ಭೂಷಣ್ ಆರೋಪ - Electoral bonds - ELECTORAL BONDS

ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಸ್ಥಾಪನೆ ಮಾಡುವ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ವಿಚಾರಣೆಗೆ ಬರಲಿದೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

Etv Bharat
Etv Bharat

By ETV Bharat Karnataka Team

Published : Apr 20, 2024, 9:37 PM IST

ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಲಂಚ ಪಡೆದು ದೇಶದಲ್ಲಿ ಮಾನವನ ಜೀವಕ್ಕೆ ಹಾನಿಯಾಗುವಂತಹ ಔಷಧಗಳನ್ನು ಪೂರೈಕೆ ಮಾಡುವುದಕ್ಕೆ ಬಿಜೆಪಿ ಅವಕಾಶ ಕಲ್ಪಿಸಿದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಚುನಾವಣಾ ಬಾಂಡ್​ ವಿಶ್ವದಲ್ಲಿಯೇ ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದ್ದು, ಈ ಸಂಬಂಧ ತನಿಖೆಗೆ ವಿಶೇಷ ತನಿಖಾ ದಳ(ಎಸ್ಐಟಿ) ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಜಾಗೃತ ಕರ್ನಾಟಕ, ಬಹುತ್ವ ಕರ್ನಾಟಕ ಮತ್ತು ಜನಾಧಿಕಾರ ಸಂಘರ್ಷ ಪರಿಷತ್​ ವತಿಯಿಂದ ಶನಿವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ 'ಚುನಾವಣಾ​ ಬಾಂಡ್​-ಇದೊಂದು ದೊಡ್ಡ ಹಗರಣ ಏಕೆ'? ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲೆಕ್ಟ್ರೋಲ್​ ಬಾಂಡ್​ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಸ್ಥಾಪನೆ ಮಾಡುವ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ವಿಚಾರಣೆಗೆ ಬರಲಿದೆ. ನಮ್ಮ ಪರವಾದ ತೀರ್ಪು ಬರುವ ನಿರೀಕ್ಷೆಯಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಕ್ಕೆ ಚುನಾವಣಾ ಬಾಂಡ್​​ನಿಂದ ಕೋಟ್ಯಂತರ ರೂಪಾಯಿ ಹರಿದು ಬಂದಿದೆ. ಅಲ್ಲದೆ, ಚುನಾವಣಾ​ ಬಾಂಡ್​ ಖರೀದಿ ಮಾಡಿದ ಕಂಪನಿಗಳಿಗೆ ದೊಡ್ಡ ಪ್ರಮಾಣದ ಗುತ್ತಿಗೆಗಳನ್ನು ನೀಡಲಾಗಿದೆ. ನಷ್ಟದಲ್ಲಿರುವ ಕಂಪೆನಿಗಳು ಸಹ ಕೋಟ್ಯಂತರ ರೂ. ಬಾಂಡ್​ಗಳನ್ನು ಖರೀದಿ ಮಾಡಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಚುನಾವಣಾ​ ಬಾಂಡ್​ ಖರೀದಿಗಾಗಿ ಸಾಂವಿಧಾನಿಕವಾಗಿ ರಚನೆಯಾಗಿರುವ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಈ ಇಲಾಖೆಗಳು ದಾಳಿ ನಡೆಸಿದ ಬಳಿಕ ಹಲವು ಕಂಪನಿಗಳು ಆಡಳಿತ ಪಕ್ಷದ ಬಾಂಡ್​ಗಳನ್ನು ಖರೀದಿ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದಿನ ಕಾರಣಕರ್ತರು ಯಾರು ಎಂಬುದು ತಿಳಿಯಬೇಕಾಗಿದೆ. ಆದ್ದರಿಂದ ಈ ಬಗ್ಗೆ ವಿಶೇಷ ತನಿಖಾ ದಳ ರಚನೆ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ:ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ?: ಸಿಎಂ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಕಣ್ಗಾವಲಿನಲ್ಲಿರಬೇಕು. ಸಹಭಾಗಿ ಪ್ರಜಾತಂತ್ರವೆಂದರೆ ಸರ್ಕಾರಗಳ ನೀತಿ ನಿರೂಪಣೆಗಳಲ್ಲಿ ಜನ ಭಾಗಿಯಾಗುವಂತಿರಬೇಕು. ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿಯು ದೇಶದಲ್ಲಿನ ಇತರೆ ಪಕ್ಷಗಳಿಗಿಂತಲೂ ಒಟ್ಟು ಪಡೆದ ಹಣಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ವಂತಿಗೆಯ ಮೂಲಕ ಪಡೆದಿದೆ. ಇತರೆ ರಾಜಕೀಯ ಪಕ್ಷಗಳ ಬ್ಯಾಂಕ್‌ ಖಾತೆಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ದೂರಿದರು.

ಚುನಾವಣಾ ಆಯೋಗ ಪಕ್ಷಾತೀತವಾಗಿರಬೇಕು. ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಸೇರಿ ಆಯ್ಕೆ ಮಾಡಬೇಕಿತ್ತು. ಆದರೆ, ಒಬ್ಬ ಆಯುಕ್ತರ ಹುದ್ದೆ ಖಾಲಿಯಿತ್ತು. ಅದನ್ನು ನೇಮಿಸುವ ಮುಂಚೆ ನಾವು ಕೋರ್ಟು ಮಧ್ಯಪ್ರವೇಶಿಸಬೇಕು ಎಂದು ಕೋರಿದೆವು. ಆದರೆ, ಅಷ್ಟರಲ್ಲಿ ಸರ್ಕಾರವು ಇದ್ದಕ್ಕಿದ್ದಂತೆ ಒಬ್ಬರನ್ನು ನೇಮಕ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯನ್ನೇ ಆಯ್ಕೆ ಸಮಿತಿಯಿಂದ ತೆಗೆದು ಹಾಕಿ, ಆ ಜಾಗದಲ್ಲಿ ಓರ್ವ ಸಚಿವರನ್ನು ಹಾಕಿಕೊಳ್ಳುವ ಕಾನೂನನ್ನು ತಂದಿದೆ ಎಂದರು.

ಇದನ್ನೂ ಓದಿ:ಚುನಾವಣಾ ಬಾಂಡ್​ ವಿಶ್ವದ ದೊಡ್ಡ ಹಗರಣ, ಬಿಜೆಪಿ 150 ಸೀಟಿಗೆ ಸೀಮಿತವಾಗುತ್ತೆ: ರಾಹುಲ್​ ಗಾಂಧಿ ಭವಿಷ್ಯ - Rahul Gandhi prediction

ABOUT THE AUTHOR

...view details