ಬೆಂಗಳೂರು:ವಾರೆಂಟ್ ಇರೋದರಿಂದ ಪ್ರಜ್ವಲ್ ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ವಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮೇಲೆ ವಾರೆಂಟ್ ಇದೆ. ಪ್ರಜ್ವಲ್ ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ವಾ?. ಎಸ್ಐಟಿಯವರು ಅದನ್ನು ಗಮನಿಸ್ತಾರೆ. ವಾರೆಂಟ್ ಇರೋದ್ರಿಂದ ಅರೆಸ್ಟ್ ಮಾಡ್ತಾರೆ. ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಬೇಕು. ಏರ್ಪೋರ್ಟ್ಗೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ. ನಂತರ ಅವರ ಹೇಳಿಕೆಗಳು.. ಮತ್ತೊಂದು.. ನಡೆಯುತ್ತೆ ಎಂದರು.
ಫ್ಲೈಟ್ ಟಿಕೆಟ್ ವೈರಲ್: ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ಮೇ 31ರಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಮೂಲಕ ಹೇಳಿರುವ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಲು ಸಿದ್ಧತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜರ್ಮನಿಯಿಂದ ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನಲಾಗಿದ್ದು, ಅದರ ಪ್ರತಿಯೊಂದು ವೈರಲ್ ಆಗಿದೆ.
ಟಿಕೆಟ್‌ನಲ್ಲಿರುವ ಮಾಹಿತಿಯ ಪ್ರಕಾರ ಗುರುವಾರ(ಮೇ 30) ಮಧ್ಯಾಹ್ನ 12:05ಕ್ಕೆ ಜರ್ಮನಿಯ ಮ್ಯೂನಿಚ್ ಏರ್ಪೋರ್ಟ್ನಿಂದ ಹೊರಡಲಿರುವ ಲುಫ್ಥಾನ್ಸ ಏರ್‌ಲೈನ್ಸ್ ಮೂಲಕ ಪ್ರಜ್ವಲ್ ಪ್ರಯಾಣಿಸಲಿದ್ದು ಶುಕ್ರವಾರ ಬೆಳಗ್ಗಿನ ಜಾವ 12:30ಕ್ಕೆ ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟಿಗೆ ಅವರು ತಲುಪಲಿದ್ದಾರೆ.
ಡೆತ್ನೋಟ್ನಲ್ಲಿ ಸಚಿವರ ಹೆಸರಿಲ್ಲ: ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಸಿಐಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಆ ಇಲಾಖೆಯಿಂದ ದೂರು ಬಂದಿದೆ. ಒಬ್ಬರು ಒಂದು ಅಮೌಂಟ್ ಹೇಳ್ತಾ ಇದ್ದಾರೆ. ತನಿಖೆ ನಡೆಯುತ್ತಿದೆ. ಸತ್ಯ ಹೊರ ಬರುತ್ತೆ. ಬೇರೆ ಅಕೌಂಟ್ಗಳಿಗೆ ಹಣ ಹೋಗಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿಯವರು ರಾಜೀನಾಮೆ ಕೇಳ್ತಾನೆ ಇರ್ತಾರೆ. ಯಾರ ಸೂಚನೆ ಮೇರೆಗೆ ಹಣ ಹೋಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗುತ್ತೆ. ಡೆತ್ನೋಟ್ನಲ್ಲಿ ಸಚಿವರು ಅಂತ ಬರೆದಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.