ದಾವಣಗೆರೆ :ಬೆಣ್ಣೆ ನಗರಿ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಹಾಗೂ ಜಿ ಎಂ ಸಿದ್ದೇಶ್ವರ್ ಕುಟುಂಬಗಳ ನಡುವೆ ನಡೆಯುವ ಚುನಾವಣೆಗಳು ರೋಚಕ. ಆದರೆ, ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ಗಳು ಅವರದ್ದೇ ಎರಡು ಕುಟುಂಬಗಳ ಮಹಿಳಾ ಅಭ್ಯರ್ಥಿಗಳಿಗೆ ಮಣೆ ಹಾಕಿವೆ.
ಕಳೆದ ಮೂರು ಬಾರಿ ಲೋಕಸಭೆ ಅಭ್ಯರ್ಥಿಯಾಗಿ ಕಡಿಮೆ ಅಂತರದಲ್ಲಿ ಪರಾಜಿತಗೊಂಡಿದ್ದ ಹಾಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇನ್ನು ಬಿಜೆಪಿಯಿಂದ ಹಾಲಿ ಸಂಸದ ಜಿ. ಎಂ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಬಿಜೆಪಿ ಲೋಕಸಭೆಯ ಕಣಕ್ಕಿಳಿಸಿದೆ.
ಈ ಬಾರಿ ಶಾಮನೂರು ಸೊಸೆ, ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭಾ ಚುನಾವಣೆ ಎಂಬ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಸಂಸದ ಜಿ. ದಿ ಮಲ್ಲಿಕಾರ್ಜುನಪ್ಪ ಅವರ ಸೊಸೆ, ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರು ಈಗಾಗಲೇ ಮತಬೇಟೆ ಆರಂಭಿಸಿದ್ದಾರೆ.
ದಾವಣಗೆರೆ ಇತಿಹಾಸದಲ್ಲೇ ಇದೇ ಮೊದಲು ಮಹಿಳಾ ಅಭ್ಯರ್ಥಿಗಳು ಕಣಕ್ಕೆ: ಆಗಸ್ಟ್ 15, 1997ರಲ್ಲಿ ನೂತನವಾಗಿ ದಾವಣಗೆರೆ ಜಿಲ್ಲೆಯಾಗಿ ರೂಪುಗೊಂಡಿತ್ತು. ಅಂದಿನ ಸಿಎಂ ದಿ. ಜೆ ಹೆಚ್ ಪಟೇಲ್ ಅವರು ಈ ಜಿಲ್ಲೆಯನ್ನು ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಡಿಸಿ, ನೂತನ ಜಿಲ್ಲೆ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ಯಾವೊಬ್ಬ ಮಹಿಳಾ ಅಭ್ಯರ್ಥಿಗಳು ಅಖಾಡಕ್ಕಿಳಿದಿರುವ ಉದಾಹರಣೆ ಇಲ್ಲ.
ಆದರೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಬಿಜೆಪಿಯಿಂದ ಗಾಯಿತ್ರಿ ಸಿದ್ದೇಶ್ವರ್ ಅವರು ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ನೂತನ ಜಿಲ್ಲೆಯಾದಾಗಿನಿಂದ ಎರಡು ಬಾರಿ ಹಾಲಿ ಸಂಸದ ಜಿ. ಎಂ ಸಿದ್ದೇಶ್ವರ್ ಅವರ ತಂದೆ ಜಿ. ಮಲ್ಲಿಕಾರ್ಜುನಪ್ಪ ಹಾಗೂ ನಾಲ್ಕು ಬಾರಿ ಜಿ. ಎಂ ಸಿದ್ದೇಶ್ವರ ಅವರು ಸ್ಪರ್ಧೆ ಮಾಡಿದ್ದರು.