ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾದ ಬೆನ್ನಲ್ಲೇ ಗುಡ್ಡ ಕುಸಿತದ ಆತಂಕ ಕೊಂಚ ಕಡಿಮೆಯಾಗಿದೆ. ಆದರೆ ಜಿಲ್ಲೆಯಲ್ಲಿ ಹಾದು ಹೋಗಿರುವ ಹೆದ್ದಾರಿಗಳಲ್ಲಿನ ಅರೆಬರೆ ಕಾಮಗಾರಿ, ಆಳಗಲದ ಗುಂಡಿಗಳಿಂದಾಗಿ ನಿತ್ಯ ಸಂಚರಿಸುವ ಸ್ಥಳೀಯರು ಮಾತ್ರವಲ್ಲದೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೂ ಕೂಡ ಜೀವಭಯ ಕಾಡುವಂತಾಗಿದೆ.
ಹೌದು, ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ದುರಂತಗಳು ಸಂಭವಿಸಿದ್ದವು. ಸದ್ಯ ಮಳೆ ಕಡಿಮೆಯಾಗಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಅವ್ಯವಸ್ಥೆ ಇದೀಗ ನಿತ್ಯ ಸಂಚರಿಸುವವರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.
ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ 10 ವರ್ಷಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಅರೆಬರೆ ಹೆದ್ದಾರಿಯಲ್ಲಿ ದಿನದಿಂದ ಅಪಘಾತ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಹೆದ್ದಾರಿಯಲ್ಲಿ ಸೂಕ್ತ ಮಾರ್ಗಸೂಚಿಗಳಿಲ್ಲದೆ, ಏಕಾಏಕಿ ಎದುರಾಗುವ ತಿರುವುಗಳಿಂದ ಸಂಚಾರವೇ ದುಸ್ತರವಾಗಿದೆ. ಇದಲ್ಲದೆ ಶಿರಸಿ ಕುಮಟಾ ಹೆದ್ದಾರಿ, ಹೊನ್ನಾವರ ಬೆಂಗಳೂರು ಹೆದ್ದಾರಿಗಳು ಕೂಡ ಸಂಪೂರ್ಣ ಹೊಂಡಮಯವಾಗಿದ್ದು ಜನ ನಿತ್ಯ ಸರ್ಕಸ್ ಮಾಡಿಯೇ ತೆರಳಬೇಕಾಗಿದೆ. ಅಧಿಕಾರಿಗಳು ಹಣ ಇದ್ದರೂ ಗುಂಡಿ ಮುಚ್ಚಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದರೆ ಹೆದ್ದಾರಿಗಳಲ್ಲಿ ಟೋಲ್ ನಿರಂತರವಾಗಿ ಸಂಗ್ರಹಿಸಲಾಗುತ್ತಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.