ಬೆಂಗಳೂರು:ರಾಜ್ಯದಲ್ಲಿ ಮೇ 7ರಂದು ನಡೆಯಲಿರುವ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಗತ್ಯ ಸೇವೆಗಳ ಇಲಾಖೆ ಸಿಬ್ಬಂದಿಗೆ ಇಂದಿನಿಂದ ಮೂರು ದಿನಗಳ ಕಾಲ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಲೆನಾಡು, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗ ಸೇರಿ 14 ಲೋಕಸಭಾ ಕ್ಷೇತ್ರಗಳಲ್ಲಿ ಅಂಚೆ ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. ಇಂದಿನಿಂದ ಮೇ 3ರ ವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಅಂಚೆ ಮತದಾನ ಮಾಡಬಹುದಾಗಿದೆ.
ಅಗತ್ಯ ಸೇವೆಗಳ ಇಲಾಖೆಗಳಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಳಾಖೆಗಳ ಸಿಬ್ಬಂದಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗ ಅಂಚೆ ಮತದಾನ ಕೇಂದ್ರಗಳನ್ನು ತೆರೆದಿದೆ. ಅರ್ಹ ಮತದಾರರು ಅಂಚೆ ಮತಪತ್ರಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ರಾಜ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಹಂತದ ಮತದಾನಕ್ಕೆ ಸಿದ್ಧತೆ : ಚುನಾವಣಾ ಆಯೋಗವು ಮೇ 7 ರಂದು ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಇವಿಎಂಗಳನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ನಿಯೋಜನೆ ಕಾರ್ಯ ನಡೆದಿದೆ. ಇದಲ್ಲದೆ, ಚುನಾವಣಾ ಆಯೋಗದಿಂದ ಮನೆ, ಮನೆಗೆ ಮತದಾರರ ಚೀಟಿ ಹಂಚುವ ಕಾರ್ಯ ನಡೆದಿದೆ.