ಕರ್ನಾಟಕ

karnataka

ETV Bharat / state

ಪ್ರಾಸಿಕ್ಯೂಷನ್​ಗೆ ಶಿಫಾರಸು ಹಿಂದೆ ರಾಜಕೀಯ ದುರುದ್ದೇಶ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ - FORMER CM BS YEDIYURAPPA

ಸಿದ್ದರಾಮಯ್ಯ ಅವರಿಗೆ ಉಪಚುನಾವಣೆಯಲ್ಲಿ ಸೋಲುವ ಆತಂಕ ಶುರುವಾಗಿದೆ. ಹಾಗಾಗಿ ಕೋವಿಡ್​ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ ದೂರಿದರು.

Former CM BS Yediyurappa
ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ (ETV Bharat)

By ETV Bharat Karnataka Team

Published : Nov 9, 2024, 1:15 PM IST

Updated : Nov 9, 2024, 1:27 PM IST

ಬಳ್ಳಾರಿ: "ಕೋವಿಡ್ ಹಗರಣದ ಕುರಿತು ಸರ್ಕಾರ ಪ್ರಾಸಿಕ್ಯೂಷನ್​ಗೆ ಶಿಫಾರಸು ಮಾಡಿರುವುದರ ಹಿಂದೆ ರಾಜಕೀಯ ‌ದುರುದ್ದೇಶವಿದೆ‌" ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ತೋರಣಗಲ್‌‌ನಲ್ಲಿ ಇಂದು ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾವು ಯಾವ ಹಗರಣವನ್ನೂ‌ ಮಾಡಿಲ್ಲ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಅದು ತುಂಬಾ ಹಳೇಯದು, ರಾಜಕೀಯ ದುರುದ್ದೇಶದಿಂದ ಮತ್ತೆ ಅದನ್ನು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಲಾಭ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಿಂದ ಅವರಿಗೇನೂ ಲಾಭ ಆಗೋದಿಲ್ಲ" ಎಂದು ತಿಳಿಸಿದರು.

ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ (ETV Bharat)

ಯಾವ ತನಿಖೆಗೂ ಬೇಕಿದ್ದರೆ ಕೊಡಲಿ, ಉಪಚುನಾವಣೆಯಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲಿ ‌ನಿರೀಕ್ಷೆ ಮೀರಿ ಜನರ ಬೆಂಬಲ ಸಿಗುತ್ತಿದೆ. ಮೋದಿ ಅವರ ಅಪಾರ ಪ್ರಭಾವ ಕೆಲಸ‌ ಮಾಡಲಿದೆ. ಮೂರಕ್ಕೂ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನನ್ನ ಅಧಿಕಾರಾವಧಿಯಲ್ಲಿ ‌ಯಾವ ಹಗರಣವೂ‌ ನಡೆದಿಲ್ಲ. ಪ್ರಾಸಿಕ್ಯೂಷನ್​ಗೆ ನೀಡಿರುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲವನ್ನೂ ನಾವು ಕಾನೂನು ಚೌಕಟ್ಟಿನಲ್ಲಿ ಅನುಷ್ಠಾನ ಮಾಡಿದ್ದೇವೆ. ದುರುದ್ದೇಶ‌‌ ಪೂರಕವಾಗಿ ಕೇಸ್ ದಾಖಲಿಸುವುದು,‌ ವಿಚಾರಣೆಗೆ ಅನುಮತಿ ‌ನೀಡುವುದು ನಡೆದಿದೆ.‌ ಶ್ರೀರಾಮುಲು ಕೋವಿಡ್​ನಲ್ಲಿ ‌ಯಾವುದೇ ಹಗರಣ ಮಾಡಿಲ್ಲ. ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಎಲ್ಲವನ್ನೂ ನಾವು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ ಎನ್ನುವ ವಿಶ್ವಾಸವಿದೆ." ಎಂದರು.

ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ‌ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕ್ಯಾಬಿನೆಟ್​ನ ಅನೇಕ ಸಚಿವರುಗಳ ಜೊತೆಗೆ ಇಲ್ಲೇ ಬೀಡು ಬಿಟ್ಟಿರುವುದು ನೋಡಿದರೆ, ಸೋಲುವ ಆತಂಕ ಶುರುವಾಗಿರುವುದು ಸ್ಪಷ್ಟವಾಗುತ್ತಿದೆ. ಮತ್ತು ರಾಮುಲು ಮೇಲೂ‌ ದುರುದ್ದೇಶಪೂರ್ವಕ ಪ್ರಾಸಿಕ್ಯೂಷನ್ ಅನುಮತಿ ‌ನೀಡಿದ್ದಾರೆ. ಬೇರೆ ದಾರಿ ಇಲ್ಲದೆ ಕೋವಿಡ್​ ಹಗರಣವನ್ನು ಮುನ್ನೆಲೆಗೆ ತಂದಿದ್ದಾರೆ. ಆ ಸಮಯದಲ್ಲಿ ನಾನಾಗಲಿ, ಮಾಜಿ ಸಚಿವ ಬಿ ಶ್ರೀರಾಮುಲು ಆಗಲಿ, ಯಾರೇ ಆಗಲಿ ಯಾವುದೇ ತಪ್ಪು ಮಾಡಿಲ್ಲ. ಇವತ್ತು ಕೂಡ ನಾನು ಇಲ್ಲೇ ಪ್ರವಾಸ ಮಾಡಲಿದ್ದೇನೆ. ಇಲ್ಲಿನ ವಾತಾವರಣವನ್ನು ಗಮನಿಸಿದರೆ ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್ ಅಕ್ರಮ ಸಂಬಂಧ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು: ಸಚಿವ ದಿನೇಶ್ ಗುಂಡೂರಾವ್

Last Updated : Nov 9, 2024, 1:27 PM IST

ABOUT THE AUTHOR

...view details