ಬೆಂಗಳೂರು: ಬಿಜೆಪಿಯಂತೆ ಕಾಂಗ್ರೆಸ್ನಿಂದಲೂ ಪಕ್ಷ ಸೇರ್ಪಡೆಗೆ ಆಹ್ವಾನ ಬಂದಿರುವುದು ಸತ್ಯ. ಆದರೆ ನನ್ನ ನಿರ್ಧಾರ ಆ ಪಕ್ಷಕ್ಕೋ, ಈ ಪಕ್ಷಕ್ಕೋ ಅಂತ ನೋಡಿಕೊಂಡು ಮಾಡಲ್ಲ. ಮಂಡ್ಯದ ಜನತೆ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತೇನೆ. ಏಪ್ರಿಲ್ 3ರ ರಂದು ಮಂಡ್ಯದಲ್ಲಿಯೇ ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ಅಭಿಮಾನಿಗಳು-ಮತದಾರರ ಹಿತ ಮುಖ್ಯ:ಅಭಿಮಾನಿಗಳ ಜೊತೆ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಂದಲೂ ಜನಾಭಿಪ್ರಾಯ ತೆಗೆದುಕೊಂಡೇ ನಾನು ನಿರ್ಧಾರ ಮಾಡುತ್ತೇನೆ. ಇವತ್ತು ಜನರು ಅಭಿಪ್ರಾಯ ಹೇಳಿದ್ದಾರೆ. ನಾನೂ ಆಪ್ತರ ಜೊತೆ ಚರ್ಚೆ ಮಾಡಬೇಕು. ಮಂಡ್ಯದಲ್ಲೇ ತೀರ್ಮಾನ ಪ್ರಕಟ ಮಾಡುತ್ತೇನೆ. ಇದು ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ನನಗೆ ನನ್ನ ಭವಿಷ್ಯ ಮುಖ್ಯವಲ್ಲ, ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಗೂ ಮತದಾರರ ಹಿತ ಮುಖ್ಯ ಎಂದರು.
ಕಳೆದ ಬಾರಿ ಇದ್ದ ಸ್ಥಿತಿಯೇ ಈಗಲೂ ಬಂದಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರಣಕ್ಕೆ ಕಳೆದ ಬಾರಿ ಸೀಟು ಕೊಡಲ್ಲ ಅಂತಾ ಕಾಂಗ್ರೆಸ್ ಹೇಳಿತ್ತು. ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣಕ್ಕೆ ಸೀಟು ನೀಡಲ್ಲ ಎಂದು ಬಿಜೆಪಿ ತಿಳಿಸಿದೆ. ಮಂಡ್ಯ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ, ಇಲ್ಲ ಎನ್ನಲ್ಲ. ಆದರೆ, ಈಗ ಅದು ಜೆಡಿಎಸ್ಗೆ ಸಿಕ್ಕಿದೆ. ಹಾಗಾ,ಗಿ ಬಿಜೆಪಿಯಿಂದ ಅಲ್ಲಿ ನನಗೆ ಅವಕಾಶ ಇಲ್ಲವಾಗಿದೆ ಎಂದು ತಿಳಿಸಿದರು.
ಮಂಡ್ಯದಲ್ಲೇ ಅಂತಿಮ ನಿರ್ಧಾರ:ನಿನ್ನೆ ವಿಜಯೇಂದ್ರ ಬಂದಿದ್ದರು, ಉನ್ನತ ಮಟ್ಟದ ಸ್ಥಾನಮಾನ ಕೊಡುವ ಲೆಕ್ಕಾಚಾರ ಹೈಕಮಾಂಡ್ನಿಂದ ಇದೆ, ನಾವು ಎಲ್ಲಾ ನೋಡಿಕೊಳ್ಳಲಿದ್ದೇವೆ ಎನ್ನುವ ಭರವಸೆಯೊಂದಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದರು. ನಾನು ನಮ್ಮ ಕಾರ್ಯಕರ್ತರ ಭವಷ್ಯವೇನು ಎಂದೆ. ಅದಕ್ಕೆ ಅವರು, ನೀವು ಹೇಳಿದಂತೆ ಕಾರ್ಯಕರ್ತರಿಗೂ ಅವಕಾಶ ಮಾಡಲು ಸಿದ್ಧ ಎಂದಿದ್ದಾರೆ. ನಂಬಿದವರ ಕೈಬಿಡಬಾರದು ಎನ್ನುವುದಕ್ಕಾಗಿ ಸಭೆ ಕರೆದು ಮಂಡ್ಯದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ನನಗೆ ಎಲ್ಲ ಪಕ್ಷಗಳಿಂದಲೂ ಆಹ್ವಾನ ಬರುತ್ತಿದೆ, ಫೋನ್ ಕಾಲ್ ಬರುತ್ತಿದೆ ಎಂದು ಕಾಂಗ್ರೆಸ್ನಿಂದ ಪಕ್ಷ ಸೇರ್ಪಡೆ ಆಹ್ವಾನ ಇದೆ ಅಂತ ಒಪ್ಪಿಕೊಂಡ ಸುಮಲತಾ, ನಾರಾಯಣಗೌಡರಿಗೆ ಎಲ್ಲವೂ ಗೊತ್ತಿದೆ. ಎಲ್ಲ ಪ್ರಶ್ನೆಗಳಿಗೂ 3ನೇ ತಾರೀಕಿನಂದು ಉತ್ತರ ಸಿಗುತ್ತದೆ. ಏಪ್ರಿಲ್ 3ರಂದು ಯಾವಾಗ, ಎಲ್ಲಿ ಸಭೆ ಅಂತ ತಿಳಿಸುತ್ತೇವೆ. ನನ್ನ ನಿರ್ಧಾರ ಯಾವ ಪಕ್ಷಕ್ಕೆ ಅನುಕೂಲ ಆಗಲಿದೆ ಎನ್ನುವುದಕ್ಕಿಂತ, ಅಂಬಿ ಅಭಿಮಾನಿಗಳ ಭವಿಷ್ಯ ದೃಷ್ಟಿಯಲ್ಲಿರಿಸಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ಮಂಡ್ಯದಲ್ಲಿ ಬಿಜೆಪಿ ಬೆಳೆಸಬೇಕು ಎಂದರೆ ಅವರಿಗೇ ಸೀಟ್ ಇಟ್ಟುಕೊಂಡರೆ ಅನುಕೂಲವಾಗಲಿದೆ ಎಂದು ಹೇಳಿದ್ದೆವು. ಸೀಟು ಉಳಿಸಿಕೊಳ್ಳಿ ಎಂದೇ ಕೇಳಿದ್ದೆವು. ಆದರೆ, ಜೆಡಿಎಸ್ಗೆ ಹಂಚಿಕೆಯಾಗಿದೆ. ಬಿಜೆಪಿ ಹೈಕಮಾಂಡ್ ಮೊದಲಿಂದಲೂ ಗೌರವದಿಂದ ನಡೆದುಕೊಂಡಿದೆ ಎಂದು ಬಿಜೆಪಿ ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸಿದರು.