ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ತಡೆದು ಬಿಜೆಪಿ ಪ್ರತಿಭಟನೆ ನಡೆಸಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಿಡದಿ ಠಾಣೆಗೆ ಕರೆದೊಯ್ಯಲಾಯಿತು.
ಕೆಂಗೇರಿ ಬಳಿ ಪ್ರತಿಭಟನಾ ರ್‍ಯಾಲಿ ನಂತರ ಕಾರುಗಳ ಮೂಲಕ ಮೈಸೂರು ಕಡೆ ಹೊರಟ ಬಿಜೆಪಿ ನಾಯಕರು ಕಣ್ ಮಿಣಕೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್‌ಪ್ರೆಸ್ ಹೈವೇ ರೋಡ್ ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದರು. ಇಡೀ ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸಿ ಸಂಪೂರ್ಣ ರಸ್ತೆಯನ್ನು ಬ್ಲಾಕ್ ಮಾಡಲಾಯಿತು. ಇದರಂದಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತವಾಯಿತು. ಕೂಡಲೇ ಅಲ್ಲಿಗೆ ಬಂದ ಪೊಲೀಸರು, ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರೆಲ್ಲನ್ನೂ ವಶಕ್ಕೆ ಪಡೆದುಕೊಂಡು ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ವಿಜಯೇಂದ್ರ ನೇತೃತ್ವದಲ್ಲಿ ಬಿಡದಿ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು.
ಮತ್ತೊಂದೆಡೆ, ತಮ್ಮೇಶ್ ಗೌಡ ಸೇರಿ ಬಿಜೆಪಿ ನಾಯಕರ ನಿವಾಸದ ಮುಂದೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರು ಮನೆಯಿಂದ ಹೊರಬರುತ್ತಿದ್ದಂತೆ ವಶಕ್ಕೆ ಪಡೆದರು. ಕಾಂಗ್ರೆಸ್ನ ಈ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸ್ಥಳ ಬದಲಾವಣೆ ಮಾಡಿ ನಾಯಂಡಹಳ್ಳಿ ಬದಲು ಮೈಸೂರು ರಸ್ತೆ ಕದಂಬ ಹೋಟೆಲ್ ಹತ್ತಿರದಲ್ಲೇ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಮೈಸೂರಿಗೆ ಕಾರುಗಳ ಮೂಲಕ ತೆರಳಲು ನಿರ್ಧರಿಸಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು.