ಚಿಕ್ಕಮಗಳೂರು:ಕಳೆದ ಮೂರು ದಿನಗಳ ಹಿಂದೆ ಸಮಾಜದ ಮುಖ್ಯವಾಹಿನಿಗೆ ಬಂದು ಶರಣಾಗತರಾದ ಆರು ಮಂದಿ ನಕ್ಸಲರ ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಿತ್ತಲೆಗುಲಿ ಬಳಿಯ ಅರಣ್ಯ ಪ್ರದೇಶದಲ್ಲಿ ಪಿಎಸ್ಐ ತಂಡ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದೆ. ಮುಖ್ಯವಾಹಿನಿಗೆ ಬಂದರೆ ಸಹಾನುಭೂತಿಯಿಂದ ನಡೆದುಕೊಳ್ಳಲಾಗುವುದು ಎಂಬ ರಾಜ್ಯ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ 6 ಮಂದಿ ನಕ್ಸಲರು ಜ.8ರಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದ್ದರು.
ಶಾಂತಿಗಾಗಿ ನಾವು ಸಂಘಟನೆ ಹಾಗೂ ಶರಣಾಗತಿ ನೀತಿ ಸಮಿತಿ ಸದಸ್ಯರು ಮನವೊಲಿಸಿದ ಬಳಿಕ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಕೆ. ವಸಂತ, ಜಿಶಾ ಹಾಗೂ ಮಾರೆಪ್ಪ ಅರೋಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಈ ವೇಳೆ ಹೂಗುಚ್ಛ ಹಾಗೂ ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಲಾಗಿತ್ತು.
ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳು:ಇದೀಗ ಪೊಲೀಸರು ಒಂದು ಎಕೆ - 56 ಗನ್, ಮೂರು 303 - ರೈಫಲ್, ಒಂದು 12 - ಬೋರ್ ಎಸ್‌ಬಿಬಿಎಲ್ ಹಾಗೂ ಒಂದು ದೇಶ ನಿರ್ಮಿತ ಪಿಸ್ತೂಲ್ ಸೇರಿ 6 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.