ಕರ್ನಾಟಕ

karnataka

ETV Bharat / state

ಪ್ರತಿಷ್ಠಿತ ಕಂಪನಿಗಳ ಡಿಟರ್ಜೆಂಟ್ ಪೌಡರ್ ನಕಲು ತಯಾರಿಕೆ ಅಡ್ಡೆ ಮೇಲೆ ಪೊಲೀಸ್​​ ದಾಳಿ - Detergent Powder

ನಕಲಿ ಡಿಟರ್ಜೆಂಟ್ ಪೌಡರ್ ತಯಾರಿಸಿ, ಮಾರಾಟ ಮಾಡುತ್ತಿದ್ದ ಘಟಕದ ಮೇಲೆ‌ ಪೊಲೀಸರು ದಾಳಿ‌ ನಡೆಸಿ, ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.

police-raid
ಪ್ರತಿಷ್ಠಿತ ಕಂಪನಿಗಳ ಡಿಟರ್ಜೆಂಟ್ ಪೌಡರ್ ನಕಲು ತಯಾರಿಕೆ ಅಡ್ಡೆ ಮೇಲೆ ಪೊಲೀಸ್​​ ದಾಳಿ

By ETV Bharat Karnataka Team

Published : Mar 10, 2024, 1:09 PM IST

ಬೆಂಗಳೂರು :ಪ್ರತಿಷ್ಠಿತ ಬ್ರ್ಯಾಂಡ್​​ಗಳ ಡಿಟರ್ಜೆಂಟ್ ಪೌಡರ್ ಉತ್ಪನ್ನಗಳ ನಕಲು ತಯಾರಿಸಿ, ಮಾರಾಟ ಮಾಡುತ್ತಿದ್ದ ಘಟಕದ ಮೇಲೆ‌ ಮಲ್ಲೇಶ್ವರಂ ಠಾಣೆ ಪೊಲೀಸರು ದಾಳಿ‌ ನಡೆಸಿದ್ದಾರೆ. ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದ್ದು, ಮಾಲೀಕ ಅರ್ಜುನ್ ಜೈನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ನಕಲಿ ಬ್ರ್ಯಾಂಡ್‌ನ ಡಿಟರ್ಜೆಂಟ್ ಪ್ಯಾಕೆಟ್​​ಗಳನ್ನು ಮಲ್ಲೇಶ್ವರಂನ ವಿವಿಧ ಅಂಗಡಿಗಳಿಗೆ ಪೂರೈಸುವ ಕೆಲಸದಲ್ಲಿ ನಿರತರಾಗಿದ್ದಾಗಲೇ ಆರೋಪಿಯ ಕಡೆಯವರನ್ನು ವಶಕ್ಕೆ ಪಡೆದು, ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಮಾದನಾಯಕನಹಳ್ಳಿ ಬಳಿ ನಡೆಯುತ್ತಿದ್ದ ತಯಾರಿಕಾ ಕಾರ್ಖಾನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ ಸುಮಾರು 20 ಲಕ್ಷ ರೂ. ಮೌಲ್ಯದ ಡಿಟರ್ಜೆಂಟ್ ವಸ್ತುಗಳು, ವಿವಿಧ ಕಂಪನಿಯ ಲೇಬಲ್​ಗಳು ಹಾಗೂ ಸುಮಾರು ಮಿಕ್ಸಿಂಗ್ ಮಷಿನ್​​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಆರ್​​ಟಿಐ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ್ದವರ ಬಂಧನ​:ಆರ್​​ಟಿಐ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ್ದ ಆರು ಜನ ಆರೋಪಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಬಳಗೋಡಿನ ಆರ್​​ಟಿಐ ಕಾರ್ಯಕರ್ತ ನಾಗರಾಜ್ ಕೆ. ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳಾದ ಮನೀಶ್ (28), ಶಶಿಕುಮಾರ್ ರೆಡ್ಡಿ (20), ಕೃಷ್ಣ (30), ಸತೀಶ್ (44), ವೇಣುಗೋಪಾಲ್ (55) ಹಾಗೂ ಗೋವಿಂದರಾಜು ಬಂಧಿತರು.

ಆರ್​​ಟಿಐ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ್ದವರು ಅರೆಸ್ಟ್

ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದ ಗೋವಿಂದರಾಜು ಹಾಗೂ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸತೀಶ್ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ, ಈ ಕುರಿತು ಆರ್​​ಟಿಐ ಅರ್ಜಿ ಸಲ್ಲಿಸಿ ನಾಗರಾಜ್ ಮಾಹಿತಿ ಕಲೆ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಇತರೆ ಆರೋಪಿಗಳೊಂದಿಗೆ ಸೇರಿ ನಾಗರಾಜ್ ಹತ್ಯೆಗೆ ಸಂಚು ರೂಪಿಸಿದ್ದಾರೆ. ಅದರಂತೆ ಫೆಬ್ರವರಿ 29ರಂದು ನಾಗರಾಜು ಕೆಂಗೇರಿ ಬಳ ಹೋಗುವಾಗ ಆರೋಪಿಗಳು ಅವರ ಮೇಲೆ ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಬಳಿಕ ಚೇತರಿಸಿಕೊಂಡ ನಾಗರಾಜ್ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಕೃಷ್ಣ ಚಂದ್ರಾಲೇಔಟ್ ಠಾಣೆಯ ರೌಡಿಶೀಟರ್​​ ಆಗಿದ್ದು, ಮನೀಶ್ ವಿರುದ್ಧವೂ ಕೆಲ ಠಾಣೆಗಳಲ್ಲಿ‌ ಕಳ್ಳತನ ಹಾಗೂ ಹಲ್ಲೆ ಪ್ರಕರಣಗಳಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತರಿಂದ ಮಾರಕಾಸ್ತ್ರ, ಒಂದು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ ಎಂದು‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮೈಸೂರು ಪಾಲಿಕೆ ಮಾಜಿ ಸದಸ್ಯನ ಸಹೋದರ ಭೀಕರ ಹತ್ಯೆ: ಮೂವರ ಬಂಧನ

ABOUT THE AUTHOR

...view details