ಬೆಳಗಾವಿ:ಅಪಹರಣಕ್ಕೆ ಒಳಗಾಗಿದ್ದ ಜಿಲ್ಲೆಯ ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜ್ ಅಸುಂಡಿ ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೈಲಹೊಂಗಲ ನ್ಯಾಯಾಲಯಕ್ಕೆ ನಾಗರಾಜ್ ಅಸುಂಡಿಯನ್ನು ಕಿತ್ತೂರು ಪೊಲೀಸರು ಹಾಜರುಪಡಿಸಿದ್ದಾರೆ. ಅಲ್ಲದೇ ಅಪಹರಣ ಪ್ರಕರಣದ ಮೂವರು ರೂವಾರಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ನಾಗರಾಜ್ ಅಸುಂಡಿಯನ್ನು ಕಿಡ್ನಾಪ್ ಮಾಡಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡರಾದ ಅಶೋಕ ಮಾಳಗಿ, ಬಸವರಾಜ ಸಂಗೊಳ್ಳಿ, ಸುರೇಶ್ ಕುದರೆಮನೆ ವಿರುದ್ಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಾಗರಾಜ್ ತಂದೆ ಬಸವರಾಜ ಅಸುಂಡಿ ದೂರು ನೀಡಿದ್ದರು.
ದೂರಿನ ಮೇರೆಗೆ ಕಿತ್ತೂರು ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಿಗೆ ಬಲೆ ಬೀಸಿದ್ದರು. ಅದೇ ರೀತಿ ಬಸವರಾಜ್ ಅಸುಂಡಿ ಮತ್ತು ಅವರನ್ನು ಅಪಹರಣ ಮಾಡಿದ್ದ ಮೂವರು ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.