ಉಡುಪಿ :ಮಲ್ಪೆ ಪರಿಸರದಲ್ಲಿ ನಕಲಿ ಆಧಾರ್ ಕಾರ್ಡ್ನೊಂದಿಗೆ ಕೆಲಸಕ್ಕೆ ಬಂದು ವಡಬಾಂಡೇಶ್ವರದ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಏಳು ಮಂದಿ ಬಾಂಗ್ಲಾ ದೇಶಿಯರು ಸೇರಿದಂತೆ, ಒಟ್ಟು 9 ಮಂದಿಯನ್ನು ಮಲ್ಪೆ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಮಾತನಾಡಿ, 'ಬಾಂಗ್ಲಾ ದೇಶದ ಮೊಹಮ್ಮದ್ ಮಾಣಿಕ್ ಎಂಬಾತ ಫೇಕ್ ಪಾಸ್ಪೋರ್ಟ್ ಬಳಸಿ ದುಬೈಗೆ ಹೋಗಲು ಪ್ರಯತ್ನ ಮಾಡಿದ್ದಾನೆ. ಆಗ ಕಸ್ಟಮ್ಸ್ ಇಮಿಗ್ರೇಷನ್ ಅಧಿಕಾರಿಗಳು ಪರಿಶೀಲನೆ ವೇಳೆ ಹಿಡಿದು ಬಜ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿ ಅಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಈ ಮಾಹಿತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ನಮಗೆ ನೀಡಿದ್ದರಿಂದ ಅವರನ್ನ ವಿಚಾರಣೆಗೆ ಒಳಪಡಿಸಿದಾಗ ಇವರ ಜೊತೆ ಏಳು ಜನ ವಾಸವಿದ್ದಿದ್ದು ತಿಳಿದುಬಂತು' ಎಂದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿದರು (ETV Bharat) 'ಅದರಂತೆ ಮಲ್ಪೆ ಪೊಲೀಸರು ಹಕೀಂ ಅಲಿ, ಸುಜೋನ್, ಇಸ್ಮಾಯೀಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸಾಜಿಬ್, ಕಾಜೋಲ್, ಉಸ್ಮಾನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ನಕಲಿಯಾಗಿ ಆಧಾರ್ ಕಾರ್ಡ್ ಸೃಷ್ಟಿಸಿ ಇವರು ಸುಮಾರು 3 ವರ್ಷಗಳಿಂದ ಇಲ್ಲಿ ವಾಸವಿರುವುದು ಪತ್ತೆಯಾಗಿದೆ. ಆರೋಪಿಗಳನ್ನ ವಿಚಾರಣೆ ನಡೆಸಿ ಕೇಸ್ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ' ಎಂದು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸಿಕ್ಕೀಂ ಅಗರ್ತಲಾದ ಕಾಜೋಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದವ. ಆರೋಪಿಗಳ ಪೈಕಿ ಉಸ್ಮಾನ್ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಲ್ಲೇ ಠಿಕಾಣಿ... ಬಾಂಗ್ಲಾ ಪ್ರಜೆಯನ್ನು ಜೈಲಿಗಟ್ಟಿದ ಕೋರ್ಟ್