ಬೆಂಗಳೂರು :ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಮಡಿವಾಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಿವರಾಜ್ ಎಂಬುವರು ಇದೀಗ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಯ ಆವರಣದಲ್ಲಿರುವ ಬಾವಿಯಲ್ಲಿ ಅನುಮಾನಸ್ಪದವಾಗಿ ಶವದ ರೂಪವಾಗಿ ಪತ್ತೆಯಾಗಿದ್ದಾರೆ.
2020ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಕಾನ್‌ಸ್ಟೇಬಲ್ ಶಿವರಾಜ್ ನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ರಾಯಚೂರಿನ ದೇವದುರ್ಗ ತಾಲೂಕಿನ ಶಿವರಾಜ್, ಕಳೆದ ಎರಡೂವರೆ ತಿಂಗಳ ಹಿಂದೆ ಭಾಗ್ಯ ಎಂಬುವರೊಂದಿಗೆ ಮದುವೆಯಾಗಿತ್ತು. ದಂಪತಿ ಉತ್ತರಹಳ್ಳಿಯಲ್ಲಿ ವಾಸವಾಗಿದ್ದರು. ಜೂನ್ 25ರಂದು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ದ್ವಿಚಕ್ರ ವಾಹನದಲ್ಲಿ ಶಿವರಾಜ್ ಹೋಗಿದ್ದು, ಮತ್ತೆ ಮನೆಗೆ ಬಂದಿರಲಿಲ್ಲ. ಬಳಿಕ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವುದು ಗೊತ್ತಾಗಿ ಆತನ ಸಹೋದರ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.
ಮತ್ತೊಂದೆಡೆ ಶಿವರಾಜ್ ಅಣ್ಣನ ಮಗನಿಗೆ ವಾಣಿ ಎಂಬುರೊಂದಿಗೆ ಮದುವೆಯಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ವರದಕ್ಷಿಣೆ ಕಿರುಕುಳದಡಿ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ವಾಣಿ ಅವರು ಶಿವರಾಜ್ ಸೇರಿದಂತೆ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದರು ಎಂದು ಮಿಸ್ಸಿಂಗ್ ದೂರಿನಲ್ಲಿ ಮೃತನ ಸಹೋದರ ಉಲ್ಲೇಖಿಸಿದ್ದರು. ದೂರು ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೃತ ಶಿವರಾಜ್ ವಿರುದ್ಧ ವಾಣಿ ಪೋಸ್ಟ್ ಮಾಡಿದ್ದರು. ಅಲ್ಲದೆ ಬೆದರಿಕೆವೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಶಿವರಾಜ್ ಮನನೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಶಿವರಾಜ್ ಅವರ ಮಾವ ಮಾತನಾಡಿ, 'ಮದುವೆಯಾಗಿ ಎರಡೂವರೆ ತಿಂಗಳಾಗಿದೆ. ಉತ್ತರಹಳ್ಳಿಯಲ್ಲಿ ಹೆಂಡತಿ ಹಾಗೂ ಪೋಷಕರೊಂದಿಗೆ ವಾಸವಾಗಿದ್ದರು. ಇವರ ಸಾವಿಗೆ ಅವರ ಅಣ್ಣನ ಮಗನೇ ಕಾರಣ ಎಂದು ಆರೋಪಿಸಿದ್ದಾರೆ. ಕೆಲಸಕ್ಕೆ ಹೋಗುವುದಾಗಿ ಹೇಳಿದ್ದು, ಇದೀಗ ಸಾವನ್ನಪ್ಪಿದ್ದಾನೆ. ಇದರ ಹಿಂದೆ ಏನೋ ಮೋಸ ನಡೆದಿದೆ' ಎಂದು ಅನುಮಾನ ವ್ಯಕ್ತಪಡಿಸಿದರು. ಸದ್ಯ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಶಿವರಾಜ್ ಸಾವಿನ ರಹಸ್ಯ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಶವ ಕೆರೆಯಲ್ಲಿ ಪತ್ತೆ.. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶಂಕೆ